ಕುಲ್ಫಿ ಮಾರಿ ಜೀವನ ಸಾಗಿಸುತ್ತಿರುವ ಏಷ್ಯನ್ ಗೇಮ್ಸ್ ಬಾಕ್ಸರ್!

ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬಾಕ್ಸರ್ ದಿನೇಶ್ ಕುಮಾರ್ ಇದೀಗ ಹರಿಯಣಾದ ಬೀದಿಗಳಲ್ಲಿ ಕುಲ್ಫಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ! ಬಾಕ್ಸರ್ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದವರು ಈಗ ಕುಲ್ಫಿ ಖರೀದಿಸುತ್ತಿದ್ದಾರೆ!!
ಒಂದು ಕಾಲದಲ್ಲಿ ಹರಿಯಾಣದಲ್ಲಿ ದಿನೇಶ್ ಕುಮಾರ್ ಪಂದ್ಯ ಇದೆ ಅಂದರೆ ಜನ ಟೀವಿ ಮುಂದೆ ಕುಳಿತಿರುತ್ತಿದ್ದರು. ಅಖಾಡಕ್ಕೆ ಇಳಿದರೆ ದಿನೇಶ್ಗೆ ಪದಕ ಖಚಿತ ಎಂದೇ ಬೆಟ್ಟಿಂಗ್ ನಡೆಯುತ್ತಿತ್ತು. ಆದರೆ ಈಗ ಅದೇ ಬೀದಿಗಳಲ್ಲಿ ಕುಲ್ಫಿ ಮಾರಿ ದಿನೇಶ್ ಕುಮಾರ್ ಜೀವನ ಸಾಗಿಸುವಂತಾಗಿದೆ.
2014ರಲ್ಲಿ ಸಮನದಲ್ಲಿ ದಿನೇಶ್ ಅವರ ಕಾರು ಟ್ರಕ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದ ನಂತರ ದಿನೇಶ್ ಕುಮಾರ್ ಅವರ ಜೀವನದಲ್ಲಿ ಏರುಪೇರು ಸಂಭವಿಸಿತು. ಭಾರತಕ್ಕಾಗಿ 17 ಚಿನ್ನದ ಪದಕ 1 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದಿರುವ ದಿನೇಶ್ ಸಾಧನೆ ಈಗ ಯಾವುದೂ ಅವರ ಬೆನ್ನಿಗೆ ಇಲ್ಲ.
ಇಂಗ್ಲೆಂಡ್ಗೆ ಮಗನನ್ನು ಕಳುಹಿಸಬೇಕು ಎಂದು ತಂದೆ ಬ್ಯಾಂಕ್ಗಳಲ್ಲಿ ಸಾಲದ ಮೇಲೆ ಸಾಲ ಮಾಡಿದ್ದಾರೆ. ಈಗ ಸಾಲ ತೀರಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಸರಕಾರ ಆಗಲಿ, ಯಾವುದೇ ಸಂಸ್ಥೆಗಳಿಂದಾಗಲಿ ನಮಗೆ ನೆರವು ಸಿಕ್ಕಿಲ್ಲ. ನಾವು ಈಗ ಹೇಗಿದ್ದೇವೆ ಎಂಬುದು ಕೂಡ ಯಾರಿಗೂ ಬೇಕಾಗಿಲ್ಲ ಎಂದು ದಿನೇಶ್ ಕುಮಾರ್ ಅವರ ಹಿರಿಯ ಸೋದರ ಹೇಳಿದ್ದಾರೆ.
ನನಗಿನ್ನೂ 30 ವರ್ಷ. ನನ್ನಲ್ಲಿ ಬಾಕ್ಸಿಂಗ್ ಇನ್ನೂ ಉಳಿದಿದೆ. ತಂದೆಯ ಸಾಲ ತೀರಿಸಲು ನಾನು ಏನಾದರೂ ಮಾಡಲೇಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕುಲ್ಫಿ ಮಾರುವುದು ಬಿಟ್ಟು ಬೇರೆನೂ ದಾರಿ ಇಲ್ಲ. ಮತ್ತೆ ಬಾಕ್ಸಿಂಗ್ಗೆ ಮರಳುವ ಗುರಿ ಇದೆ ಎಂದು ದಿನೇಶ್ ಕುಮಾರ್ ನುಡಿದರು.