ಸುಳ್ಳು ಹೇಳುವುದರಲ್ಲಿ ಮೋದಿ ನಂ.1: ಮಲ್ಲಿಕಾರ್ಜುನ ಖರ್ಗೆ

ಸುಳ್ಳು ಹೇಳುವುದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂಬರ್ ಒನ್. ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳುತ್ತಾರೆ ಎಂದು ಕೇಂದ್ರ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ಜಮಖಂಡಿ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಬಹಿರಂಗ ಭಾಷಣ ಮಾಡಿದ ಅವರು, ಮೋದಿ ಈ ಹಿಂದೆ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದಿದ್ದರು. ಇದುವರೆಗೂ ಆಗಿಲ್ಲ ಎಂದರು.
ವಿದೇಶದಲ್ಲಿರುವ ಕಪ್ಪು ಹಣತಂದು ನಿಮ್ಮ ಜೇಬಿಗೆ ಹದಿನೈದು ಲಕ್ಷ ಹಾಕುತ್ತೇನೆ ಎಂದು ಮೋದಿ ಭರವಸೆ ನೀಡಿದ್ದರು.ಅದು ಕಾರ್ಯರೂಪಕ್ಕೆ ಬಂತಾ? ಈ ರೀತಿ ಸುಳ್ಳು ಭರವಸೆ ನೀಡಿ ಜನರಿಗೆ ಮೋದಿ ಮೋಸ ಮಾಡಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ. ನಮ್ಮವರು ತ್ಯಾಗ ಮಾಡಿದವರು. ಮಹಾತ್ಮ ಗಾಂಧಿ ದೇಶಗಾಗಿ ಪ್ರಾಣವನ್ನೇ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು ಎಂದು ಇಂದಿರಾಗಾಂಧಿ ಹಾಗೂ ರಾಜೀವ ಗಾಂಧಿ ಬಲಿದಾನಕೊಟ್ಟರು. ಸಮಾಜಕ್ಕಾಗಿ ನಮ್ಮ ಪಕ್ಷ ಕೆಲಸ ಮಾಡಿದೆ. ಬಿಜೆಪಿ ಪಕ್ಷ ಏನು ಮಾಡಿದೆ ? ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ, ರೈತರನ್ನು ಬಡವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೋದಿಗೆ ರೈತರ ಸಾಲಮನ್ನಾ ಯಾಕೆ ಮಾಡುತ್ತಿಲ್ಲ? ಹಿಂದಿನ ಯಪಿಎ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಲಮನ್ನಾ ಮಾಡಿದೆ. ನೋಡಿ ಯೋಚನೆ ಮಾಡಿ ಕೆಲಸ ಮಾಡಿದವರಿಗೆ ಓಟು ಕೊಡ್ತಿರೊ ?ಸುಳ್ಳು ಹೇಳುವವರಿಗೆ ಓಟು ಕೊಡ್ತಿರೋ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದರು.