Top

ಅಂಧ ಯುವಕನ ನೀರಿನ ಬಿಲ್ ಬರೋಬ್ಬರಿ 47 ಸಾವಿರ ರೂಪಾಯಿ..!

ಅಂಧ ಯುವಕನ ನೀರಿನ ಬಿಲ್ ಬರೋಬ್ಬರಿ 47 ಸಾವಿರ ರೂಪಾಯಿ..!
X

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಜಲಮಂಡಳಿ ಅಧಿಕಾರಿಗಳು ಅಂಧ ಯುವಕನಿಗೆ 47 ಸಾವಿರ ರೂಪಾಯಿ ನೀರಿನ ಬಿಲ್ ನೀಡಿದ್ದು, ಬಿಲ್ ಕೇಳಿ ಯುವಕ ದಂಗಾಗಿದ್ದಾನೆ.

ಹುಬ್ಬಳ್ಳಿಯ ಅಗಸರ ಓಣಿ ನಿವಾಸಿ ಪರಶುರಾಮ್ ಇಳಕಲ್‌ಗೆ 47ಸಾವಿರ ರೂಪಾಯಿ ನೀರಿನ ಬಿಲ್ ಬಂದಿದ್ದು, ತಂದೆ ಕಳೆದುಕೊಂಡ ತಾಯಿಯ ಜೊತೆ ವಾಸವಿರುವ ಪರಶುರಾಮ್‌ಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಇಂಥಾದ್ರಲ್ಲಿ ಅಧಿಕಾರಿಗಳು ಕೊಟ್ಟ ಬಿಲ್ ಈತನನ್ನು ಇನ್ನೂ ಕಂಗಾಲಾಗಿಸಿದೆ.

ಇನ್ನು ಬಿಲ್‌ನಲ್ಲಿ ಅಸಲಿ ಬಿಲ್‌ಗಿಂತ ಬಡ್ಡಿಯೇ ಜಾಸ್ತಿಯಾಗಿದ್ದು, 23ಸಾವಿರ ರೂಪಾಯಿ ಅಸಲು ಬಿಲ್‌ಗೆ 24ಸಾವಿರ ರೂಪಾಯಿ ಬಡ್ಡಿಯಾಗಿದೆ. 2011ರಿಂದ 2018ರವರೆಗೂ ಬಿಲ್ ನೀಡಿದ್ದು, ಯುವಕ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದಾನೆ.

ಕಣ್ಣು ಸರಿ ಇಲ್ಲದ ತಾಯಿ, ಕಣ್ಣಿಲ್ಲದ ನನ್ನ ಬಳಿ ಅಷ್ಟು ಹಣವಿಲ್ಲ. ಬಿಲ್ ಕಟ್ಟೋಕೆ ನಮ್ಮಲ್ಲಿ ಶಕ್ತಿ ಇಲ್ಲ. ನಮಗೆ ವಾರಕ್ಕೆ ಎರಡು ಗಂಟೆ ಮಾತ್ರ ಕುಡಿಯುವ ನೀರು ಬರುತ್ತೆ. ನಮಗೆ ಸರಿಯಾಗಿ ಊಟವೇ ಸಿಗೋದು ಕಷ್ಟ ಆಗಿದೆ, ನೀರನ್ನಾದರೂ ಸರಿಯಾಗಿ ನೀಡಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೇ ಈ ಹಿಂದೆ ಕೂಡ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕಷ್ಟ ತೋಡಿಕೊಂಡಿದ್ದೆ. ಅದಕ್ಕೆ ಸಿದ್ದರಾಮಯ್ಯ ಅವರು ಸ್ಪಂದಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಹೇಳಿದ್ದರು. ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬೆಂಗಳೂರು, ಧಾರವಾಡ, ಹುಬ್ಬಳ್ಳಿಗೆ ದಿನನಿತ್ಯ ಅಲೆದಾಡುವ ಪರಿಸ್ಥಿತಿ ಬಂದಿದೆ. ಆರ್ಥಿಕವಾಗಿ ನಾವು ಸದೃಢರಿಲ್ಲ. ದಯವಿಟ್ಟು ಹಳೆಯ ಬಿಲ್ ಮನ್ನಾ ಮಾಡಿ ಎಂದು ಅಂಧ ಯುವಕ ಪರಶುರಾಮ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Next Story

RELATED STORIES