ಗಂಡನ ರಕ್ಷಿಸಿದ ಗರ್ಭಿಣಿ ಪತ್ನಿ: ಆಮೇಲೇನಾಯ್ತು ಗೊತ್ತಾ?

ಆಕೆ ತುಂಬು ಗರ್ಭಿಣಿ.. ಯಾವ ಕ್ಷಣದಲ್ಲಿ ಬೇಕಾದರೂ ಜನ್ಮ ನೀಡುವ ಹಂತದಲ್ಲಿದ್ದಳು. ಈ ಸಂದರ್ಭದಲ್ಲಿ ಗಂಡ ಪಕ್ಕದಲ್ಲಿ ಇರಬೇಕು. ಅವನೇ ನನ್ನನ್ನು ನೋಡಿಕೊಳ್ಳಬೇಕು ಎಂದು ಹೆಣ್ಮಕ್ಕಳು ಬಯಸುವುದು ಸಹಜ. ಆದರೆ ಆಕೆ ನೋಡಿಕೊಳ್ಳಬೇಕಾದ ಪತಿಯೇ ಹೃದಯಾಘಾತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಏಕೆ ಏನು ಮಾಡಿಯಾಳು?

ಹೌದು ಇಂತಹದ್ದೊಂದು ಸಂದಿಗ್ಧ ಪರಿಸ್ಥಿತಿ ನಡುವೆಯೂ ದಿಟ್ಟತನ ಮೆರೆದ ಮಹಿಳೆಯೊಬ್ಬಳು ಪತಿಯನ್ನು ರಕ್ಷಿಸಿಕೊಂಡಿದ್ದೂ ಅಲ್ಲದೇ ಮಗುವಿಗೆ ಜನ್ಮ ನೀಡಿ ಹೆಣ್ಮೆಕ್ಕಳೇ ಸ್ಟ್ರಾಂಗ್​ ಗುರೂ ಎಂಬುದುನ್ನು ನಿರೂಪಿಸಿದ್ದಾಳೆ.

ಅಮೆರಿಕದ ಆಶ್ಲೆ ಗೊಟ್ಟೆ 39 ವಾರಗಳ ಗರ್ಭಿಣಿ.  ಮಗುವಿಗೆ ಜನ್ಮ ನೀಡುವ ಬಗ್ಗೆ ಕಾತರ, ಆಸೆಗಳೊಂದಿಗೆ ಎದುರು ನೋಡುತ್ತಾ ಮಲಗಿದ್ದವಳಿಗೆ ರಾತ್ರಿ ದಿಢೀರನೆ ಎಚ್ಚರವಾಯಿತು. ನೋಡಿದರೆ ಪಕ್ಕದಲ್ಲಿ ಮಲಗಿದ್ದ ಪತಿ ಆ್ಯಂಡ್ರ್ಯೂ ಗೊಟ್ಟೆ ಎದುಸಿರು ಬಿಡುತ್ತಿದ್ದರು. ಉಸಿರಾಡಲು ಅವರು ಕಷ್ಟಪಡುತ್ತಿದ್ದುದ್ದನ್ನು ನೋಡಿ ಆತಂಕಕ್ಕೆ ಒಳಗಾದಳು.

ಏನೂ ಮಾಡಲು ತೋಚದೇ 911 ಕರೆ ಮಾಡಿ ರಕ್ಷಣೆ ಕೋರಿದರು. ಕೂಡಲೇ ನಾವು ಬರುತ್ತೇವೆ. ಅಲ್ಲಿಯವರೆಗೂ ತುರ್ತು ಚಿಕಿತ್ಸೆ ನೀಡುವುದು ಹೇಗೆ ಎಂದು ಆ ಕಡೆಯಿಂದ ವಿವರಿಸತೊಡಗಿದರು. ಕೂಡಲೇ ನಾನು ಗರ್ಭಿಣಿ. ಯಾವ ಕ್ಷಣದಲ್ಲಿ ಬೇಕಾದರೂ ಹೆರಿಗೆ ಆಗುವ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿದಳು.

ಇದನ್ನು ಕೇಳಿದ ರಕ್ಷಣಾ ಸಿಬ್ಬಂದಿ ನಿಮ್ಮಿಂದ ಆಗುವ ಪ್ರಯತ್ನ ಮಾಡಿ ಎಂದು ಹೊರಟರು. ಎದ್ದೆಳಲು ಆಗದ ಸ್ಥಿತಿಯಲ್ಲಿದ್ದ ಆಶ್ಲೆ, ಪಕ್ಕದಲ್ಲಿ ಮಲಗಿದ್ದ ಗಂಡನ ಕೈ ಹಿಡಿದು, ಎದೆಯ ಮೇಲೆ ಎಷ್ಟು ಸಾಧ್ಯವೋ ಅಷ್ಟು ಭಾರ ಹಾಕಿ ಒತ್ತಲು ಆರಂಭಿಸಿದಳು. ಹೀಗೆ ಕೆಲವು ಸಮಯ ಕಷ್ಟಪಟ್ಟು ಮಾಡುತ್ತಿದ್ದಾಗ ರಕ್ಷಣಾ ಸಿಬ್ಬಂದಿ ಬಂದು ಆ್ಯಂಡ್ರ್ಯೂ ಹಾಗೂ ಆಶ್ಲೆ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು.

ತುರ್ತು ಚಿಕಿತ್ಸೆ ನಂತರ ಆ್ಯಂಡ್ರ್ಯೂ ಸುಧಾರಿಸಿಕೊಂಡು ಎದ್ದು ನೋಡಿದಾಗ ಆಶ್ಲೆ ಮಗುವಿಗೆ ಜನ್ಮ ನೀಡಿದ್ದಳು. ಅಮ್ಮ-ಮಗು ಕೂಡ ಇಬ್ಬರೂ ಸುರಕ್ಷಿತವಾಗಿದ್ದರು. ಗಂಡನನ್ನು ಉಳಿಸಿಕೊಳ್ಳುವ ಜೊತೆಗೆ ಒಂದೇ ಬಾರಿಗೆ ಎರಡು ಜೀವ ನೀಡಿದ ತೃಪ್ತಿ ಆ ತಾಯಿಯದ್ದಾಗಿತ್ತು.