ಇನ್ಮೇಲೆ ಸಂಧಾನಕ್ಕೆ ಬರಲ್ಲ: ರೆಬೆಲ್ ಆದ ಅಂಬಿ

ಹಿರಿಯ ನಟ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಇಬ್ಬರೂ ತಮ್ಮ ನಿಲುವುಗಳಿಗೆ ಅಂಟಿಕೊಂಡಿದ್ದು ಪಟ್ಟು ಸಡಿಲಿಸದೇ ಇದ್ದ ಕಾರಣ ಸಂಧಾನದ ನೇತೃತ್ವ ವಹಿಸಿದ್ದ ಹಿರಿಯ ನಟ ಅಂಬರೀಷ್ ಗರಂ ಆಗಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪವನ್ನು ಶ್ರುತಿ ಹರಿಹರನ್ ಹೊರಿಸಿದ್ದರು. ಇದರಿಂದ ಕನ್ನಡ ಚಿತ್ರರಂಗದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿದ್ದು, ಸಂಧಾನ ಸಭೆಯನ್ನು ಗುರುವಾರ ಕರೆಯಲಾಗಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕರೆದಿದ್ದ ಸಭೆಯ ನೇತೃತ್ವ ವಹಿಸಿದ್ದ ಅಂಬರೀಷ್, ಇಬ್ಬರಿಗೂ ಒಪ್ಪಿಗೆಯಾಗುವಂತಹ ಸೂತ್ರ ರೂಪಿಸುತ್ತೇನೆ. ಇಬ್ಬರೂ ಮಾಧ್ಯಮಗಳಿಗಾಗಲಿ, ಸಾಮಾಜಿಕ ಜಾಲತಾಣದಲ್ಲಾಗಲೀ ಚರ್ಚೆ ಮಾಡಬಾರದು ಎಂದು ಓಲೈಸಲು ಯತ್ನಿಸಿದ್ದರು.
ಆದರೆ ಅಂಬರೀಷ್ ಅವರ ಮಾತನ್ನೂ ಇಬ್ಬರೂ ಕಡೆಗಣಿಸಿ ರಾಜೀ ಸಂಧಾನ ತಿರಸ್ಕರಿಸಿದರು. ಅರ್ಜುನ್ ಸರ್ಜಾ ಕಾನೂನು ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಶ್ರುತಿ ಹರಿಹರನ್ ಕೂಡ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಕೊಲೆ ಬೆದರಿಕೆಯ ದೂರು ದಾಖಲಿಸಿದರು.
ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಂಬರೀಷ್, ನಿನ್ನೆ ಮೊನ್ನೆ ಬಂದವರು ನನ್ನ ಮಾತಿಗೆ ಬೆಲೆ ನೀಡುವುದಿಲ್ಲ ಅಂತಾದರೆ ನಾನೇಕೆ ಸಂಧಾನಕ್ಕೆ ಬರಬೇಕು? ನನ್ನನ್ನು ಇನ್ಮೇಲೆ ಯಾವುದೇ ಕಾರಣಕ್ಕೂ ಸಂಧಾನಕ್ಕೆ ಕರೆಯಬೇಡಿ ಎಂದು ಹೇಳಿದ್ದಾರೆ.
ಅವರವರೇ ನಿರ್ಧಾರ ಮಾಡುವುದಾದರೆ ನಾವ್ಯಾಕೆ ಬೇಕು? ಚೇಂಬರ್ ಯಾಕೆ ಬೇಕು? ಎಂದು ಅಂಬರೀಷ್ ಇಬ್ಬರ ನಿಲುವಿನ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.