TV5 Exclusive: ದಸರಾ ಮುಗಿದರೂ ವಿದ್ಯಾರ್ಥಿಗಳಿಗೆ ದೊರೆಯದ ಸೈಕಲ್ ಭಾಗ್ಯ!

ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಮಾತು ಸರಕಾರಿ ಅಧಿಕಾರಿಗಳಿಗೆ ಚೆನ್ನಾಗಿ ಹೋಲಿಕೆ ಆಗುತ್ತದೆ ಎಂಬುದಕ್ಕೆ ಮೈಸೂರಿನ ಎಚ್​.ಡಿ. ಕೋಟೆ ಅಧಿಕಾರಿಗಳೇ ಸಾಕ್ಷಿ.

ಸರಕಾರ ಸೈಕಲ್ ಪೂರೈಸಿದ್ದರೂ ಅಧಿಕಾರಿಗಳು ಮಧ್ಯಂತರ ಪರೀಕ್ಷೆ ಮುಗಿದರೂ ಮಕ್ಕಳಿಗೆ ಸೈಕಲ್ ವಿತರಿಸದೇ ಮೂಲೆಯಲ್ಲಿ ಇರಿಸಿದ್ದಾರೆ. ಇದರಿಂದ ಮಳೆ-ಗಾಳಿಯಿಂದ ಸೈಕಲ್​ಗಳು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ.

ಎರಡು ತಿಂಗಳ ಹಿಂದೆಯೇ ವಿತರಣೆಗಾಗಿ ಸರಕಾರ ಸೈಕಲ್ ಪೂರೈಸಿದ್ದರೂ, ಮೈಸೂರಿನ ಎಚ್.ಡಿ.ಕೋಟೆಯಲ್ಲಿ ಅಧಿಕಾರಿಗಳು ಸೈಕಲ್ ವಿತರಿಸದೇ ಉಳಿಸಿಕೊಳ್ಳುವ ಮೂಲಕ ಬೇಜವಬ್ದಾರಿತನ ಮೆರೆದಿದ್ದಾರೆ.

ತಾಲೂಕಿಗೆ 2800 ಸೈಕಲ್ ಬಂದಿದ್ದರೂ ಅದರ ಪ್ರಯೋಜನ ಮಕ್ಕಳಿಗೆ ದೊರೆಯದಂತಾಗಿದೆ. ಕೆಲವು ಸೈಕಲ್ ಗಳಂತೂ ಪೂರ್ಣ ಸಿದ್ದಗೊಳಿಸದೇ ಅರ್ಧಂಬರ್ಧ ಫಿಟಿಂಗ್ ಮಾಡಿ ಬಿಡಲಾಗಿದೆ.

ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಈ ಯೋಜನೆಯನ್ನು ನಂತರವೂ ಮುಂದುವರಿಸಿಕೊಂಡು ಬರಲಾಗುತ್ತಿದೆ.

ಹಳ್ಳಿಗಾಡಿನ ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಿದ್ದ ಈ ಯೋಜನೆಗೆ ಸರಕಾರ ಸೂಕ್ತವಾಗಿ ಮುಂದುವರಿಸಿಕೊಂಡು ಬರುತ್ತಿದ್ದರೂ ಅಧಿಕಾರಿಗಳು ಮಕ್ಕಳಿಗೆ ಸೈಕಲ್ ವಿತರಿಸಲು ಮೀನಾಮೇಷ ಎಣಿಸುತ್ತಿದ್ದಾರೆ.

ಶಾಲೆ ಪ್ರಾರಂಭವಾಗಿ 6 ತಿಂಗಳೇ ಕಳೆದಿದ್ದರೂ ಸೈಕಲ್ ಭಾಗ್ಯ ಮಾತ್ರ ಮರೀಚಿಕೆಯಾಗಿದೆ. ಇದರಿಂದ ನಿತ್ಯವೂ ಎದುರುಗಡೆ ಇರುವ ಸೈಕಲ್ ನೋಡಿಕೊಂಡೇ ಮಕ್ಕಳು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳೂ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ.

Recommended For You

Leave a Reply

Your email address will not be published. Required fields are marked *