ಕಾನೂನು ಹೋರಾಟ: ಅರ್ಜುನ್, ನಿರ್ಧಾರ ಮಾಡಿಲ್ಲ: ಶೃತಿ

ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕರೆದಿದ್ದ ಸಭೆ ವಿಫಲವಾಗಿದೆ. ಹಿರಿಯ ನಟ ಅರ್ಜುನ್ ಸರ್ಜಾ ಸಂಧಾನ ಸಾಧ್ಯವೇ ಇಲ್ಲ. ಕಾನೂನು ಹೋರಾಟ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರೆ, ನಟಿ ಶ್ರುತಿ ಹರಿಹರನ್ ನಾಳೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಅರ್ಜುನ್ ಸರ್ಜಾ, ಸಂಧಾನಕ್ಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನಾನು ಕಾನೂನು ಹೋರಾಟ ಮಾಡುತ್ತೇನೆ. ಯಾರದೇ ತಪ್ಪಿದ್ದರೂ ಅವರಿಗೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದರು.
ಇದು ನನ್ನೊಬ್ಬನ ಸಮಸ್ಯೆ ಇಲ್ಲ. ನನಗೆ ನೋವಾಗಿದ್ದರೆ ಸುಮ್ಮನಿದ್ದು ಬಿಡುತ್ತೇನೆ. ಆದರೆ ನನ್ನ ಕುಟುಂಬ, ಕರ್ನಾಟಕಮ ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಹಲವಾರು ರಾಜ್ಯಗಳಲ್ಲಿನ ನನ್ನ ಅಭಿಮಾನಿಗಳಿಗೆ ನೋವಾಗಿದೆ. ಆದ್ದರಿಂದ ಸಂಧಾನ ಮಾಡಿಕೊಳ್ಳುವುದಿಲ್ಲ ಎಂದರು.
ನನ್ನನ್ನೇ ಗುರಿಯಾಗಿಸಿ ಯಾಕೆ ದಾಳಿ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಲ್ಲವೂ ಸಮಯ ಬಂದಾಗ ಹೊರ ಬರುತ್ತದೆ. ಅಲ್ಲಿಯವರೆಗೂ ಕಾಯಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತನಾಡುವುದಿಲ್ಲ ಎಂದು ಅರ್ಜುನ್ ಸರ್ಜಾ ಹೇಳಿದರು.
ನಂತರ ಮಾತನಾಡಿದ ಶ್ರುತಿ ಹರಿಹರನ್, ನನಗೆ ನೋವಾಗಿದೆ. ಹಾಗಾಗಿ ನಾನ್ಯಾಕೆ ಕ್ಷಮೆ ಕೇಳಬೇಕು? ಹೆಣ್ಣನ್ನು ಯಾಕೆ ಗುರಿಯಾಗಿಸಿ ಅವಳದ್ದೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಿರಾ? ಅವರಾಗಿಯೇ ಕಾನೂನು ಮೊರೆ ಹೋಗುವವರೆಗೂ ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದಿದ್ದೆ. ವಾಣಿಜ್ಯ ಮಂಡಳಿ ಹಿರಿಯರ ಮನವಿ ಮೇರೆಗೆ ನಾಳೆ ವರೆಗೂ ಕಾದಿದ್ದು ನಂತರ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.