Top

ಫಿಲ್ಮ್ ಛೇಂಬರ್ ವಿರುದ್ಧವೇ ಹರಿಹಾಯ್ದ ಶ್ರುತಿ ಹರಿಹರನ್​

ಫಿಲ್ಮ್ ಛೇಂಬರ್ ವಿರುದ್ಧವೇ ಹರಿಹಾಯ್ದ ಶ್ರುತಿ ಹರಿಹರನ್​
X

ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಅರೋಪ ಹೊರಿಸಿರುವ ನಟಿ ಶ್ರುತಿ ಹರಿಹರನ್, ಇದೀಗ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಅರ್ಜುನ್ ಸರ್ಜಾ ಸಂಭಾವಿತ, ಸುಸಂಸ್ಕೃತ ಎಂದು ಹೇಳಿಕೆ ನೀಡಿದ್ದ ಸಾ.ರಾ.ಗೋವಿಂದು ಸೇರಿದಂತೆ ಫಿಲ್ಮ್ ಛೇಂಬರ್ ಪದಾಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರುತಿ ಹರಿಹರನ್ ಗುರುವಾರ ನಡೆಯುವ ಸಂಧಾನ ಸಭೆಗೆ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಮುನಿರತ್ನ, ಸಾರಾ ಗೋವಿಂದು ಹಾಗೂ ಚಿನ್ನೇಗೌಡ ಸೇರಿದಂತೆ ಚೇಂಬರ್ ಹಿರಿಯರೇ.. ನೀವು ನಿಮ್ಮ ಹುದ್ದೆ ಅಲಂಕರಿಸಿರೋದು ಕಲಾವಿದರ ಹಕ್ಕುಗಳ ಸಂರಕ್ಷಣೆಗೆ. ಹೆಣ್ಣು ಮತ್ತು ಗಂಡು ನಡುವಿನ ತಾರತಮ್ಯ ಇಲ್ಲದೆ ಕೆಲಸ ಕಾರ್ಯ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.

ಸಂಗೀತಾ ಭಟ್, ಸಂಜನಾ, ಏಕ್ತಾ ಸೇರಿದಂತೆ ದನಿ ಎತ್ತಿದ ನೊಂದ ಯುವತಿಯರಿಗೆ ಯಾರಿಗೂ ನೀವು ರಕ್ಷಣೆ ಕೊಟ್ಟಿಲ್ಲ. ಸತ್ಯ ಏನು ಎಂಬುದು ನನಗೂ ಮತ್ತು ಅರ್ಜುನ್ ಸರ್ಜಾ ಅವರಿಗೆ ಮಾತ್ರ. ಕೋರ್ಟ್ ಈ ಪ್ರಕರಣ ಹೋದರೆ ಅಲ್ಲಿಯೇ ನಾನು ದಾಖಲೆ ಕೊಡುತ್ತೇನೆ ಎಂದು ಶ್ರುತಿ ವಿವರಿಸಿದ್ದಾರೆ.

ತಮ್ಮ ಹೇಳಿಕೆಯಿಂದ ನಾನಾ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಸತ್ಯಕ್ಕೆ ದೂರವಾದ ಮಾತು, ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡುವ ಉದ್ದೇಶದಿಂದ ಈ ಪತ್ರ ಬರೆಯುತ್ತಿದ್ದೇನೆ ಎಂದು ಶ್ರುತಿ ಹೇಳಿಕೊಂಡಿದ್ದಾರೆ.

ಇದು ಅರ್ಜುನ್ ಸರ್ಜಾ ವಿರುದ್ದ ನಾನು ಎತ್ತಿದ ದನಿ. ನೀವು ಊಹಿಸಿದ ಹಾಗೆ ನನ್ನ ಹಿಂದೆ ಯಾರೂ ಇಲ್ಲ. ನನಗೆ ಹೀಗೆ ಮಾಡಲು ಯಾರೂ ಕುಮ್ಮಕ್ಕು ಕೊಟ್ಟಿಲ್ಲ. ಚೇತನ್, ಪ್ರಕಾಶ್ ರೈ, ಕವಿತಾ ಲಂಕೇಶ್ ಇದಕ್ಕೆ ಕಾರಣರಲ್ಲ. ನನ್ನ ಬೆಂಬಲಕ್ಕೆ ನಿಂತವರು ಅವರು, ಅದಕ್ಕಾಗಿ ಕೃತಜ್ಞಳಾಗಿದ್ದೇನೆ. ಅರ್ಜುನ್ ಸರ್ಜಾ ಮೇಲಿನ‌ ಆರೋಪದಲ್ಲಿ ಸತ್ಯವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನನ್ನ ಮೇಲೆ ಸರ್ಜಾ ಮಾನನಷ್ಟ ಹಾಕಿದರೆ ಕಾನೂನಿನ ಹೋರಾಟಕ್ಕೆ ಸಿದ್ದ. ಕಾನೂನಿನಾತ್ಮಕ‌ ಹೋರಾಟಕ್ಕೆ ನಾನು ಸಿದ್ದಳಾಗಿದ್ದೇನೆ. ನಾನು ನನ್ನ ಸಾಕ್ಷ್ಯಗಳನ್ನ ಯಾರಿಗೂ ಕೊಡೋ‌ ಅವಶ್ಯಕತೆ ಇಲ್ಲ. ಯಾರನ್ನ ನಂಬಬೇಕು ಬಿಡಬೇಕು ಅನ್ನೋದು ನಿಮ್ಮ ಆಯ್ಕೆಗೆ ಬಿಟ್ಟಿದೆ ಎಂದಿದ್ದಾರೆ.

ಕೋರ್ಟ್ ಮೆಟ್ಟಿಲೇರಿದರೆ ಅಲ್ಲಿ ಸಾಕ್ಷ್ಯಗಳನ್ನ ಕೊಡುತ್ತೇನೆ. ಅಲ್ಲಿ ಸಾಕ್ಷ್ಯಾಧಾರ ಪರಿಶೀಲನೆ ನಂತ್ರ ನನಗೆ ನ್ಯಾಯ ಸಿಗಲಿದೆ. ಸರ್ಜಾ ಕುಟುಂಬದ ಫ್ಯಾನ್ಸ್ ಕ್ಲಬ್ ಗಳಿಂದ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ. ಟ್ರಾಲ್ ಮತ್ತು ನನ್ನ ಮೇಲಿನ ಬರಹಗಳಿಂದ ನನಗೇನೂ‌ ಆಗಬೇಕಿಲ್ಲ ನನ್ನ ಆಲೋಚನೆಯಂತೆ ಹೋರಾಟ ಮಾಡುತ್ತೇನೆ. ಇದು ನಿರಂತರ ಹೋರಾಟವಾಗಲಿದ್ದು ಅದಕ್ಕಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದೇನೆ ಎಂದು ಶ್ರುತಿ ಸ್ಪಷ್ಪಪಡಿಸಿದ್ದಾರೆ.

Next Story

RELATED STORIES