Top

ಸಿಬಿಐ ನಂ.1, ನಂ.2ಗೆ ರಜೆ, ನಾಗೇಶ್ವರ್​ಗೆ ಉಸ್ತುವಾರಿ

ಸಿಬಿಐ ನಂ.1, ನಂ.2ಗೆ ರಜೆ, ನಾಗೇಶ್ವರ್​ಗೆ ಉಸ್ತುವಾರಿ
X

ದೇಶದ ಅತೀ ದೊಡ್ಡ ತನಿಖಾ ಸಂಸ್ಥೆಯಾದ ಸಿಬಿಐನ ಮುಖ್ಯಸ್ಥ ಅಲೋಕ್ ವರ್ಮಾ ಹಾಗೂ ಡೆಪ್ಯುಟಿ ರಾಕೇಶ್ ಆಸ್ತಾನರಿಗೆ ರಾತ್ರೋರಾತ್ರಿ ರಜೆ ಮೇಲೆ ಕಳುಹಿಸಿಕೊಡಲಾಗಿದೆ. ಇದರಿಂದ ಎಂ. ನಾಗೇಶ್ವರ್ ರಾವ್ ಹಂಗಾಮಿ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಬಿಐನ ಅಗ್ರ ಹುದ್ದೆಯ ಇಬ್ಬರು ಅಧಿಕಾರಿಗಳ ನಡುವೆ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಗುದ್ದಾಟ ಶುರುವಾಗಿದ್ದು, ನ್ಯಾಯಾಲಯದ ಮೆಟ್ಟಿಲು ಏರಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಬಲವಂತದ ರಜೆಯ ಮೇಲೆ ಕಳುಹಿಸಲಾಗಿದೆ.

ಎಂ. ನಾಗೇಶ್ವರ್ ರಾವ್ ಬುಧವಾರ ಮುಂಜಾನೆಯೇ ಹಂಗಾಮಿ ಸಿಬಿಐ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ಇದೇ ಮೊದಲ ಬಾರಿಗೆ ಅಧಿಕಾರ ಸ್ವೀಕಾರ ಸಮಾರಂಭ ಏಕಾಏಕಿ ಮುಂಜಾನೆ ನಡೆದಿದೆ. ನಾಗೇಶ್ವರ್ ತತ್​ಕ್ಷಣದಿಂದಲೇ ಸಿಬಿಐ ಸಂಸ್ಥೆಯ ಕಾರ್ಯಗಳನ್ನು ಗಮನಿಸಬೇಕು ಎಂದು ಪ್ರಧಾನಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸಿಬಿಐ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೂಡ ರಜೆಯ ಮೇಲೆ ಕಳುಹಿಸಲಾಗಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ರಜೆ ಮೇಲೆ ಕಳುಹಿಸಲಾದ ಇಬ್ಬರೂ ಅಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸಿದ್ದು, ಸೂಕ್ತ ಶಿಫಾರಸುಗಳೊಂದಿಗೆ ಆಗಮಿಸುವಂತೆ ಸೂಚಿಸಿದ್ದಾರೆ.

ತಮ್ಮ ನಂತರದ ಹುದ್ದೆಯಲ್ಲಿರುವ ರಾಕೇಶ್ ಆಸ್ತಾನ ಉದ್ಯಮಿಯೊಬ್ಬರಿಂದ 3 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ಅಲೋಕ್ ವರ್ಮಾ ದೂರು ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ರಾಕೇಶ್ ಆಸ್ತಾನ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

Next Story

RELATED STORIES