ಮಾರಾಟವಾಗಿದ್ದ 10 ಲಕ್ಷ ಬಿಎಂಡಬ್ಲ್ಯೂ ಕಾರು ವಾಪಸ್!

ಜರ್ಮನಿಯ ಐಷಾರಾಮಿ ಕಾರು ಉತ್ಪಾದನಾ ಕಂಪನಿ ಜಾಗತಿಕ ಮಟ್ಟದಲ್ಲಿ ಮಾರಾಟವಾದ ಬಿಎಂಡಬ್ಲ್ಯೂ ಡೀಸೆಲ್ ಕಾರುಗಳನ್ನು ವಾಪಸ್ ಪಡೆಯಲು ಸಿದ್ಧತೆ ನಡೆಸಿದೆ.

ಕೆಲವು ಡೀಸೆಲ್ ಬಳಕೆಯ ಕಾರುಗಳಲ್ಲಿ ಕೂಲಿಂಗ್ ವ್ಯವಸ್ಥೆಯ ಬಳಿ ಇಂಧನ ಸೋರಿಕೆಯಾಗಲಿದ್ದು, ಇದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾದ ಹೆಚ್ಚುವರಿ ಡೀಸೆಲ್ ಕಾರುಗಳನ್ನು ವಾಪಸ್ ಪಡೆಯಲು ಚಿಂತನೆ ನಡೆಸಿದೆ.

ಕಾರು ಖರೀದಿಸಿದ ಗ್ರಾಹಕರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದು, ಅವರ ಕಾರುಗಳ ಲೋಪದೋಷ ಹಾಗೂ ಇತರೆ ವಿಷಯಗಳ ಮಾಹಿತಿ ಪಡೆಯಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ಬಿಎಂಡಬ್ಲ್ಯೂ ಸಂಸ್ಥೆ ಕಳೆದ ಆಗಸ್ಟ್ ನಲ್ಲಿ ಯುರೋಪ್ ಮತ್ತು ಏಷ್ಯಾದ ಕೆಲವು ದೇಶಗಳಲ್ಲಿ ಲೋಪ ಕಂಡು ಬಂದಿದ್ದ 4,80 ಲಕ್ಷ ವಾಹನಗಳನ್ನು ವಾಪಸ್ ಪಡೆದಿತ್ತು. ದಕ್ಷಿಣ ಕೊರಿಯಾದಲ್ಲಿ ಸುಮಾರು 30 ಕಾರುಗಳಲ್ಲಿ  ಬೆಂಕಿ ಕಾಣಸಿಕೊಂಡಿದ್ದರಿಂದ ಕ್ಷಮೆ ಕೇಳಿದ್ದ ಕಂಪನಿ, ನಂತರ ಲೋಪ ಕಂಡು ಬಂದ ಕಾರುಗಳನ್ನು ವಾಪಸ್ ಪಡೆಯಲು ನಿರ್ಧರಿಸಿತ್ತು.

ಡೀಸೆಲ್ ವಾಹನಗಳ ತಪಾಸಣೆ ಮಾಡಿದ ನಂತರ ಅತೀ ಕಡಿಮೆ ಅಪಾಯದ ಕುರಿತು ದುರಸ್ತಿ ಮಾಡಲಾಗಿದ್ದು, ಇದೀಗ ಮಾರಾಟವಾದ ಕಾರುಗಳನ್ನು ವಾಪಸ್ ಪಡೆಯಲು ಸಿದ್ಧತೆ ನಡೆಸಿದೆ.