ಸಚಿನ್, ದಾದಾ ಸಿಕ್ಸರ್ ದಾಖಲೆ ಮುರಿದ ರೋಹಿತ್
ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮ ವೆಸ್ಟ್ ಇಂಡಿಸ್ ವಿರುದ್ಧ ಶತಕ ಸಿಡಿಸಿದ್ದು ಮಾತ್ರವಲ್ಲ, ಏಕದಿನ ಕ್ರಿಕೆಟ್ನಲ್ಲಿ ಮಾಜಿ ನಾಯಕರಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ದಾಖಲೆಯನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.
ಗುವಾಹತಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಒಡ್ಡಿದ 322 ರನ್ಗಳ ಗುರಿ ಬೆಂಬತ್ತಿದ ಭಾರತ 42.1 ಓವರ್ ಗಳಲ್ಲಿ ಜಯಭೇರಿ ಬಾರಿಸಿತು. ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ವೈಯಕ್ತಿಕ ಶತಕಗಳನ್ನು ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ರೋಹಿತ್ ಶರ್ಮ 117 ಎಸೆತಗಳಲ್ಲಿ15 ಬೌಂಡರಿ ಹಾಗೂ 8 ಸಿಕ್ಸರ್ ಸೇರಿದ ಅಜೇಯ 152 ರನ್ ಸಿಡಿಸಿದ್ದರು. ಈ ಮೂಲಕ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ 190 ಸಿಕ್ಸರ್ ಸಿಡಿಸಿದರು. ಈ ಮೂಲಕ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು
ಮಾಜಿ ನಾಯಕ ಸೌರವ್ ಗಂಗೂಲಿ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 189 ಸಿಕ್ಸ್ ಬಾರಿಸಿದ ದಾಖಲೆಯನ್ನು ರೋಹಿತ್ ಹಿಂದಿಕ್ಕಿದರು. ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ 210 ಸಿಕ್ಸರ್ ಸಿಡಿಸಿದರುವ ಧೋನಿ ಹಾಗೂ 195 ಸಿಕ್ಸರ್ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಇದ್ದಾರೆ.
ಆರಂಭಿಕನಾಗಿ ರೋಹಿತ್ ಶರ್ಮ 168 ಸಿಕ್ಸರ್ ಸಿಡಿಸಿದ್ದು, ಸಚಿನ್ ತೆಂಡುಲ್ಕರ್ ದಾಖಲೆ ಅಳಿಸಿ ಹಾಕಿದ್ದಾರೆ. ಸಚಿನ್ ಆರಂಭಿಕನಾಗಿ 167 ಸಿಕ್ಸರ್ ಬಾರಿಸಿದ್ದಾರೆ. ಅಲ್ಲವೇ ಆರಂಭಿಕನಾಗಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಮೂರನೇ ಆಟಗಾರನಾಗಿದ್ದಾರೆ. ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (272) ಹಾಗೂ ಸನತ್ ಜಯಸೂರ್ಯ (263) ಮೊದಲೆರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ.
ರೋಹಿತ್ ಶರ್ಮ 4ನೇ ಬಾರಿ ಪಂದ್ಯವೊಂದರಲ್ಲಿ 8ಕ್ಕಿಂತ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದರು. ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ (5 ಬಾರಿ) ಇದ್ದಾರೆ. ಭಾರತದ ಪರ ಧೋನಿ ಮತ್ತು ಯೂಸುಫ್ ಪಠಾಣ್ 2 ಬಾರಿ ಪಂದ್ಯದಲ್ಲಿ 8ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಮಾರ್ಟಿನ್ ಗುಪ್ಟಿಲ್, ಎಬಿ ಡಿವಿಲಿಯರ್ಸ್, ಶಾಹಿದ್ ಅಫ್ರಿದಿ, ಕೀರನ್ ಪೊಲಾರ್ಡ್ ತಲಾ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.