12 ವರ್ಷಗಳಲ್ಲಿ ಅಪಘಾತಗಳಿಗೆ 39 ಲಕ್ಷ ಬಲಿ!

ಯಾವುದೇ ಅಪಘಾತ ಆದರೂ ಮುನ್ನೆಚ್ಚರಿಕೆ ವಹಿಸಿದರೆ ತಪ್ಪಿಸಬಹುದು. ಅದರಲ್ಲೂ ಪಂಜಾಬ್​ನ ಅಮೃತಸರದಲ್ಲಿ ಸಂಭವಿಸಿದ ಭೀಕರ ರೈಲು ದುರಂತವನ್ನು ಮನಸ್ಸು ಮಾಡಿದ್ದರೆ ಅತ್ಯಂತ ಸುಲಭವಾಗಿ ತಪ್ಪಿಸಬಹುದಾಗಿದ್ದ ಅಪಘಾತ. ಸಣ್ಣ ನಿರ್ಲಕ್ಷ್ಯವೊಂದು 60ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು ದುರ್ದೈವ.

ಭಾರತದಲ್ಲಿ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಅದರಲ್ಲೂ 2004ರಿಂದ 2015ರ ಅವಧಿಯಲ್ಲಿ ಅಂದರೆ ಕಳೆದ 2 ವರ್ಷಗಳಲ್ಲಿ ಅಪಘಾತಗಳಿಂದ 39 ಲಕ್ಷ ಜನರು ಜೀವ ಕಳೆದುಕೊಂಡಿದ್ದಾರೆ. ರಸ್ತೆ ಅಪಘಾತವೊಂದರಲ್ಲೇ 14 ಲಕ್ಷಕ್ಕೂ ಅಧಿಕ ಜನರು ಜೀವ ಕಳೆದುಕೊಂಡಿರುವುದು ಆಘಾತಕಾರಿ ವಿಷಯವಾಗಿದೆ.

ಸರಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ತಪ್ಪಿಸಬಹುದಾದ ಅಪಘಾತ ಹಾಗೂ ತಪ್ಪಿಸಲಾಗದ ಅಪಘಾತಗಳ ವಿಂಗಡಣೆ ಮಾಡಲಾಗಿದೆ. ಅದರಲ್ಲೂ ರೈಲ್ವೆ ಕ್ರಾಸಿಂಗ್ ಬಳಿ ಮತ್ತು ಟ್ರ್ಯಾಕ್ ಮೇಲೆ ಸಂಭವಿಸಿದ ಅಪಘಾತಗಳ ಸಂಖ್ಯೆ 26 ಸಾವಿರ. ಅಂದರೆ ಪ್ರತಿದಿನ ಸರಾಸರಿ 6 ಮಂದಿ ಸಾವಿಗೀಡಾಗುತ್ತಿದ್ದಾರೆ.

ದೇಶದಲ್ಲಿ ರಸ್ತೆ ಅಪಘಾತ ಹಾಗೂ ನೀರಿನಲ್ಲಿ ಮುಳುಗು ನಂತರ ಅತೀ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ರೈಲು ಅಪಘಾತದಿಂದ.  ದೋಣಿ ಮುಳುಗಿ ಮೃತಪಟ್ಟವರ ಸಂಖ್ಯೆ 8 ಸಾವಿರ ಆಗಿದೆ.

12 ವರ್ಷದ ಅವಧಿಯಲ್ಲಿ ರಸ್ತೆ ಅಪಘಾತದಿಂದ 14.5 ಲಕ್ಷ ಜನ ಮೃತಪಟ್ಟಿದ್ದರೆ, ನೀರಿನಲ್ಲಿ ಮುಳುಗಿ 3.2 ಲಕ್ಷ, ರೈಲು ದುರಂತದಲ್ಲಿ 2.9 ಲಕ್ಷ, ಬೆಂಕಿ ಅನಾಹುತದಿಂದ 2.5 ಲಕ್ಷ ಹಾಗೂ ಮೆಟ್ಟಲಿನಿಂದ ಜಾರಿ ಬಿದ್ದು 1.4 ಲಕ್ಷ ಜನರು ಮೃತಪಟ್ಟಿದ್ದಾರೆ.