ನಾನು ಹಾಗೆ ಮಾಡಿಯೇ ಇಲ್ಲ: ಅರ್ಜುನ್ ಸರ್ಜಾ

ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಫೇಸ್ಬುಕ್ ನಲ್ಲಿ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪಕ್ಕೆ ಹಿರಿಯ ನಟ ಅರ್ಜುನ್ ಸರ್ಜಾ ತಿರುಗೇಟು ನೀಡಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.
ಶ್ರುತಿ ಹರಿಹರನ್ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಅರ್ಜುನ್ ಸರ್ಜಾ, ಶ್ರುತಿ ಹರಿಹರನ್ ಅವರದ್ದು ಎಲುಬಿಲ್ಲದ ನಾಲಗೆ. ನಾನು ಯಾವತ್ತೂ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಶೂಟಿಂಗ್ ವೇಳೆ ಎಲ್ಲರೆದುರೇ ಮೈಮುಟ್ಟಿ ಅಸಭ್ಯತೆ ತೋರುವಷ್ಟು ಕೀಳುಮಟ್ಟದ ವ್ಯಕ್ತಿಯಲ್ಲ. ಒಂದೂವರೆ ವರ್ಷದ ಹಿಂದೆಯೇ ಈ ಬಗ್ಗೆ ಹೇಳಬಹುದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?v=lig02TNE7OI
ಆರೋಪ ವಿರುದ್ಧ ನಾನು ಕೇಸ್ ದಾಖಲಿಸುತ್ತೇನೆ. ಇಷ್ಟು ದಿನದ ಲೈಫ್ನಲ್ಲಿ ಇದೀಗ ಭಾರೀ ಶಾಕ್ ಆಗಿದೆ. ಶ್ರುತಿ ಹರಿಹರನ್ ಈ ರೀತಿ ಸುಳ್ಳು ಆರೋಪ ಹೊರಿಸುತ್ತಾರೆಂದು ಕೊಂಡಿರಲಿಲ್ಲ. ನಾನು ಇಷ್ಟಕ್ಕೆ ಸುಮ್ಮನಾಗುವುದಿಲ್ಲ ಎಂದರು.
ಇದೇ ವಿಚಾರಕ್ಕೆ ಸಂಭಂದ್ದಪಟ್ಟಂತೆ ಅತ್ತೆ ಪಾರ್ವತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಅಳಿಯ ಅಂಥವರಲ್ಲ, ದೇವರಂತಾ ಮನುಷ್ಯ ಬರೋಬ್ಬರಿ 30 ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ಇಲ್ಲಿಯವರೆಗೂ ಒಂದು ಕೆಟ್ಟ ವಿವಾದ ಕೂಡ ಮಾಡಿಕೊಂಡಿಲ್ಲ. ಘಟನೆ ನಡೆದ ದಿನ ಆರೋಪ ಮಾಡದೇ ಈಗ್ಯಾಕೆ ಶ್ರುತಿ ಹರಿಹರನ್ ಆರೋಪ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದರು.
ಅರ್ಜುನ್ ನನ್ನ ಮಗಳ ಜೊತೆ ನಮ್ಮ ಕುಟುಂಬದ ಜೊತೆ ಚೆನ್ನಾಗಿದ್ದಾರೆ. ಈ ರೀತಿಯ ಆರೋಪದಿಂದ ನಮ್ಮ ಕುಟುಂಬದವರಿಗೆ ಘಾಸಿಯಾಗಿದೆ. ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡ ಹಾಕೋದಕ್ಕೆ ನಾವು ಸಿದ್ಧವಾಗಿದ್ದು, ಈ ಬಗ್ಗೆ ಕುಟುಂಬಸ್ಥರೆಲ್ಲ ಮಾತಾನಾಡಿ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಅಳಿಯ ಪರವಾಗಿ ಪಾರ್ವತಮ್ಮ ಮಾತನಾಡಿದರು.