ಜೀವಕ್ಕೆ ಕುತ್ತು ತಂದ ಕಿಸ್! ಮದ್ಯದ ಅಮಲು ತಂದ ಆಪತ್ತು!!

ಮದ್ಯದ ನಶೆಯಲ್ಲಿ ರಸ್ತೆಯಲ್ಲೇ ಗೆಳತಿಗೆ ಕಿಸ್ ಮಾಡಲು ಹೋದ ಯುವಕ ಕೊಲೆಯಾದ ಘಟನೆ ಬೆಂಗಳೂರಿನ ಮತ್ತಿಕೆರೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಬೆಂಗಳೂರಿನ ಯಶವಂತಪುರ ಸಮೀಪದ ಮತ್ತಿಕೆರೆಯ ಎಲ್ಸಿಆರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಉತ್ತರಾ ಖಂಡ್ ಮೂಲದ ಜಗದೀಪ್ ಸಿಂಗ್ (21) ಮೃತಪಟ್ಟ ದುರ್ದೈವಿ. ಗೆಳೆಯ ಸುಹಾಸ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ 12 ಗಂಟೆಗೆ ಸ್ನೇಹಿತರೊಂದಿಗೆ ಹೋಟೆಲ್ಗೆ ಊಟಕ್ಕೆ ಹೋಗಿದ್ದ ಜಗದೀಪ್ ಮತ್ತು ಸ್ನೇಹಿತ ಸುಹಾಸ್ ಮದ್ಯ ಸೇವಿಸಿದ್ದರು. ಜಗದೀಪ್, ತನ್ನ ಗೆಳತಿಗೆ ರಸ್ತೆ ಮಧ್ಯದಲ್ಲೇ ಕಿಸ್ ಮಾಡಿದ್ದಾನೆ. ಇದನ್ನು ನೋಡಿದ ಚಿಟ್ಟಿ ಅಂಡ್ ಗ್ಯಾಂಗ್, ರಸ್ತೆಯಲ್ಲೇ ಕಿಸ್ ಮಾಡ್ತಿರಾ? ಎಂದು ತಗಾದೆ ತೆಗೆದಿದ್ದಾರೆ. ಇದರಿಂದ ಮಾತಿನ ಚಕಮಕಿ ಆರಂಭಗೊಂಡಿದ್ದು, ಗ್ಯಾಂಗ್ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ.
ಜಗದೀಪ್ ಸ್ಥಳದಲ್ಲೇ ಮೃತಪಟ್ಟರೆ, ಸ್ನೇಹಿತ ಸುಹಾಸ್ ತಲೆ ಹಾಗೂ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗದೀಪ್ ಮತ್ತಿಕೆರೆ ಬಳಿಯ ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದರೆ, ಸುಹಾಸ್, ಉಡುಪಿ ಮೂಲದವರಾಗಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.