Top

ಬಿಡುಗಡೆಗೆ ಮುನ್ನವೇ ದಿ ವಿಲನ್ ಟಿಕೆಟ್ ಸೋಲ್ಡ್​ಔಟ್​!

ಬಿಡುಗಡೆಗೆ ಮುನ್ನವೇ ದಿ ವಿಲನ್ ಟಿಕೆಟ್ ಸೋಲ್ಡ್​ಔಟ್​!
X

ಬಹುನಿರೀಕ್ಷಿತ ದಿ ವಿಲನ್ ಚಿತ್ರ ಆಯುಧಪೂಜೆ ದಿನವಾದ ಗುರುವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ಈ ಚಿತ್ರದ ಮೊದಲ ದಿನದ ಎಲ್ಲಾ ಪ್ರದರ್ಶನಗಳ ಟಿಕೆಟ್ ಸಂಪೂರ್ಣ ಮಾರಾಟವಾಗಿದೆ.

ಪ್ರೇಮ್ ನಿರ್ದೇಶಿಸಿ, ಶಿವರಾಜ್​ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಈ ಚಿತ್ರದ ಕಥೆಯ ಎಳೆಯನ್ನು ಗೌಪ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರದಲ್ಲಿ ಹೀರೋ ಯಾರು ವಿಲನ್ ಯಾರು ಎಂಬ ಕುತೂಹಲಕ್ಕೆ ಗುರುವಾರ ಮಧ್ಯಾಹ್ನದ ವೇಳೆಗೆ ಜನರ ಬಾಯಲ್ಲಿ ನಲಿದಾಡಲಿದೆ.

ಸುಮಾರು 40 ಕೋಟಿ ರೂ. ಬಜೆಟ್​ನಲ್ಲಿ ತಯಾರಾಗಿರುವ ದಿ ವಿಲನ್ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲೇ ಸುಮಾರು 600 ಥಿಯೇಟರ್​ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ರಾಜ್ಯಾದ್ಯಂತ ಎಲ್ಲಾ ಥಿಯೇಟರ್​ ಗಳ ಮುಂದೆ ಬೃಹತ್ ಕಟೌಟ್​ಗಳು ತಲೆ ಎತ್ತಿದ್ದು, ಕಟೌಟ್ ಹಾಕುವುದನ್ನು ಅಭಿಮಾನಿಗಳು ತಮಟೆ ಬಾರಿಸಿ, ಕುಣಿಯುತ್ತ ಸಂಭ್ರಮಿಸಿದರು.

ಇದೇ ವೇಳೆ ನಿರ್ದೇಶಕ ಪ್ರೇಮ್, ಮಲ್ಟಿಪ್ಲೆಕ್ಸ್ ಥಿಯೇಟರ್​ಗಳ ವಿರುದ್ಧ ಸಮರ ಮುಂದುವರಿಸಿದ್ದು, ಟಿಕೆಟ್ ಬೆಲೆಯಲ್ಲಿ ಶೇ.60ರಷ್ಟು ಪಾಲು ನೀಡಬೇಕು ಎಂದು ಒತ್ತಾಯಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಕನ್ನಡೇತರ ಭಾಷೆಯ ಚಿತ್ರಗಳಿಗೆ ಶೇ.55ರಷ್ಟು ಪಾಲನ್ನು ನೀಡುತ್ತಿರುವ ಮಲ್ಟಿಪ್ಲೆಕ್ಸ್​ಗಳು ಕನ್ನಡ ಚಿತ್ರಗಳಿಗೆ ಶೇ.50ರಷ್ಟು ಪಾಲು ನೀಡುತ್ತಿವೆ. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೇ.60ರಷ್ಟು ಪಾಲು ನೀಡಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

Next Story

RELATED STORIES