Top

ಮಹಿಳೆಯರ ಮೇಲೆ ಕಲ್ಲುತೂರಾಟ: ಭಕ್ತರಿಗೆ ಲಾಠಿ ಏಟು

ಮಹಿಳೆಯರ ಮೇಲೆ ಕಲ್ಲುತೂರಾಟ: ಭಕ್ತರಿಗೆ ಲಾಠಿ ಏಟು
X

ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ಭಕ್ತರ ಗುಂಪು ಮಹಿಳೆಯರು ಹಾಗೂ ಮಾಧ್ಯಮದವರ ಮೇಲೂ ಕಲ್ಲುತೂರಾಟ ನಡೆಸಿದ್ದು, ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದರಿಂದ ಶಬರಿಮಲೆ ದೇವಸ್ಥಾನದ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಶಬರಿಮಲೆ ದೇವಸ್ಥಾನದಿಂದ 20 ಕಿ.ಮೀ. ದೂರದಲ್ಲಿರುವ ನಿಳಕ್ಕಲ್​ನಲ್ಲಿ ಪಂಪಾ ನದಿಯಲ್ಲಿ ಸ್ನಾನ ಮಾಡಿದ ನಂತರ ದೇವಸ್ಥಾನದ ದರ್ಶನಕ್ಕೆ ಆಗಮಿಸಬೇಕಿದೆ. ಇಲ್ಲಿ ಎರಡು ದಿನಗಳಿಂದ ಮಹಿಳೆಯರು ಸೇರಿದಂತೆ ಭಕ್ತರ ಗುಂಪು ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿತ್ತು.

ಶಬರಿಮಲೆ ದೇವಸ್ಥಾನದ ಮೂಲ ಅಯ್ಯಪ್ಪ ದೇವರ ಗರ್ಭಗುಡಿ ಮಾಸಿಕ ಪೂಜೆಗಾಗಿ ಬುಧವಾರ ಸಂಜೆ 5 ಗಂಟೆಗೆ ತೆರೆಯಲಾಯಿತು. ದೇವರ ದರ್ಶನಕ್ಕೆ ಪೊಲೀಸರ ಭದ್ರತೆಯೊಂದಿಗೆ ಹಲವಾರು ಮಹಿಳೆಯರು ಆಗಮಿಸಿದ್ದರು.

ಈ ವೇಳೆ ಆಕ್ರೋಶಗೊಂಡ ಭಕ್ತರ ಗುಂಪು ಮಹಿಳೆಯರು ಮತ್ತು ವರದಿಗಾರರ ಮೇಲೆ ದಾಳಿ ನಡೆಸಿದ್ದಾರೆ. ಹಲವು ವಾಹನಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ರಿಪಬ್ಲಿಕ್ ಟಿವಿ, ಸಿಎನ್ಎನ್ ನ್ಯೂಸ್ 18, ಆಜ್ ತಕ್ ಮತ್ತು ನ್ಯೂಸ್ ಮಿನಿಟ್ ಮಹಿಳಾ ಪತ್ರಕರ್ತೆಯರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಅಲ್ಲದೆ ಅವರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಅಯ್ಯಪ್ಪ, ಅಯ್ಯಪ್ಪ ಎಂದು ಘೋಷಣೆ ಕೂಗುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರು ಹಲವು ಮಹಿಳೆಯರ ಮತ್ತು ಪತ್ರಕರ್ತೆಯರ ಮೇಲೆ ದಾಳಿ ನಡೆಸಿದ್ದು, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.

ನಿಳಕ್ಕಲ್ ಶಬರಿಮಲೆಯಿಂದ 20 ಕಿ.ಮೀ. ದೂರದಲ್ಲಿದ್ದು, ಪಂಪಾ ನದಿ ತಲುಪಲು ಇದೊಂದೇ ಮಾರ್ಗ. ಹೀಗಾಗಿ ಪ್ರತಿಭಟನಾಕಾರರು ಇಲ್ಲಿ ಜಮಾಯಿಸಿ ಮಹಿಳೆಯರು ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸದಂತೆ ತಡೆಯುತ್ತಿದ್ದಾರೆ.

ಕಳೆದ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ್ದು, ತೀರ್ಪು ಪ್ರಕಟವಾದ ನಂತರ ಇಂದು ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆಯಲಾಗಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್, ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ರಾಜ್ಯಸರ್ಕಾರ ಬದ್ಧವಾಗಿದ್ದು, ದೇಗುಲ ಪ್ರವೇಶ ಮಾಡುವವರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Next Story

RELATED STORIES