ಹೊಸ ಎಣ್ಣೆ ಸಾಂಗ್ ಕೇಳಿ ಇಂಡಸ್ಟ್ರಿ ಸ್ಟಾರ್ಸ್ ಜೈಹೋ..!!

ಐದು ವರ್ಷದ ಹಿಂದೆ ಮನೆಯಿಂದ ಆಚೆಗಾಕವ್ಳೆ ವೈಫು ಅಂದಿದ್ದ ಅಧ್ಯಕ್ಷ ಅಂಡ್ ಟೀಂ, ಇದೀಗ ಮತ್ತೊಮ್ಮೆ ಎಣ್ಣೆ ಖ್ಯಾತೆ ತೆಗೆದಿದೆ. ಅಧ್ಯಕ್ಷ ಗೆಳೆಯರ ಬಳಗ ಈ ಬಾರಿ ಮನೆಗೇ ಹೋಗಲ್ಲ ಅಂತ ಪಟ್ಟು ಹಿಡಿದಿದೆ. ಆ ಪಂಚಾಯ್ತಿಗೆ ಸ್ಯಾಂಡಲ್ವುಡ್ನ ಘಟಾನುಘಟಿ ಸ್ಟಾರ್ಸ್, ಸ್ಟಾರ್ ಡೈರೆಕ್ಟರ್ಸ್ ಕೂಡ ಸಾಥ್ ಕೊಡ್ತಿದ್ದಾರೆ. ಏನೀ ಎಣ್ಣೆ ಮ್ಯಾಟ್ರು ಅಂತೀರಾ..? ಮುಂದೆ ಓದಿ.
ಸ್ಯಾಂಡಲ್ವುಡ್ ಅಂಗಳದಲ್ಲಿ ಸಾಕಷ್ಟು ಎಣ್ಣೆ ಸಾಂಗ್ಸ್ ಇವೆ. ಅದರಲ್ಲಿ ತುಂಬಾ ಕಾಡೋದು ಅಂದರೆ ಮಾಲಾಶ್ರೀ ಅವರ ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು. ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ಮೇಲಿನ ಮುನಿಸಿನಿಂದ ಎಣ್ಣೆ ಹೊಡೆದು, ಬೀದಿಯಲ್ಲಿ ರಂಪಾಟ ಮಾಡಿದ ಆ ಹಾಡು ಇಂದಿಗೂ ಎವರ್ಗ್ರೀನ್.
ಮತ್ತೊಮ್ಮೆ ಅದೇ ಮಾಲಾಶ್ರೀ ಆ್ಯಕ್ಷನ್ ಕ್ವೀನ್ ಆದ ಬಳಿಕ ಘರ್ಷಣೆ ಸಿನಿಮಾಗಾಗಿ ಅದೇ ಎಣ್ಣೆ ಹಾಡು ರೀಮಿಕ್ಸ್ ಮಾಡಿ, ಬೊಂಬಾಟ್ ಸ್ಟೆಪ್ಸ್ ಹಾಕುವ ಮೂಲಕ ಸಿನಿಪ್ರಿಯರ ಹಾರ್ಟ್ಗೆ ಕಚಗುಳಿ ಇಟ್ಟಿದ್ದರು.
ಮಾಲಾಶ್ರೀ ಹಾಡಿನ ದಾಖಲೆ ಬ್ರೇಕ್ ಮಾಡಿದಂತಹ ಹೆಮ್ಮೆ ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ರಿಗೆ ಸಲ್ಲುತ್ತದೆ. ಹೌದು, ಕಾಮಿಡಿ ಸ್ಟಾರ್ ಶರಣ್ ನಟನೆಯ ವಿಕ್ಟರಿ ಚಿತ್ರದ ಖಾಲಿ ಕ್ವಾಟ್ರು ಸಾಂಗ್ ಕುಡುಕರ ಪಾಲಿನ ಫೇವರಿಟ್ ಸಾಂಗ್ ಆಗಿ ಟ್ರೆಂಡ್ ಸೆಟ್ ಮಾಡಿಬಿಟ್ಟಿತ್ತು.
ಲೈಫು ಒಂಥರಾ ಖಾಲಿ ಕ್ವಾಟ್ರು ಬಾಟ್ಲಿ ತರಹ. ಕುಡ್ಕೊಂಡು ಮನೆಗೋಗಿದ್ಕೆ ವೈಫು ಆಚೆಗಾಕವ್ಳೆ ಅನ್ನೋ ಲಾಜಿಕ್ ಪದಗಳಿಂದ ಮ್ಯಾಜಿಕ್ ಮಾಡಿತ್ತು ವಿಕ್ಟರಿ. ಯೋಗರಾಜ್ ಭಟ್ ಸಾಹಿತ್ಯವಿದ್ದ ಈ ಹಾಡಿಗೆ ಭಟ್ಟರು, ಥೇಟ್ ಕುಡುಕರ ಶೈಲಿಯಲ್ಲೇ ತುಂಬಾ ಸ್ವಾಭಾವಿಕವಾಗಿ ಪದ ಪೋಣಿಸುವ ಮೂಲಕ ಹಾಡಿನ ಅಂದ ಚೆಂದ ಹೆಚ್ಚಿಸಿದ್ದರು.
ಇನ್ನು, ಅರ್ಜುನ್ ಜನ್ಯ ಸಂಗೀತದಲ್ಲಿ ತಯಾರಾದ ಆ ಹಾಡಿಗೆ ವಿಜಯ್ ಪ್ರಕಾಶ್ ಕಂಠದಾನ ಮಾಡಿದ್ದರು. ಇಂದಿಗೂ ಜಾತ್ರೆ, ಜನಜಂಗುಳಿ ಇರುವಂತಹ ಯಾವುದೇ ಫಂಕ್ಷನ್ ನಡೀಲಿ, ಅದ್ರಲ್ಲಿ ಈ ಹಾಡಿನ ದನಿ ಮಾರ್ದನಿಸದೆ ಇರಲ್ಲ. ಅಷ್ಟರ ಮಟ್ಟಿಗೆ ಬ್ಲಾಕ್ ಬಸ್ಟರ್ ಹಿಟ್ ಆಗೋಗಿದೆ ಶರಣ್- ಸಾಧು ಜೋಡಿಯ ಈ ಎಣ್ಣೆ ಸಾಂಗ್.
ಕಾಮಿಡಿ ಸ್ಟಾರ್ ಶರಣ್ ಮಾಡಿದ ದಾಖಲೆಯನ್ನ, ಅದೇ ಶರಣ್ ಬ್ರೇಕ್ ಮಾಡೋಕೆ ಹೊರಟಿದ್ದಾರೆ. ಹೌದು... ವಿಕ್ಟರಿ -2 ಸಿನಿಮಾಗಾಗಿ ಮತ್ತೆ ಅಂತಹದ್ದೇ, ಅದಕ್ಕಿಂತ ಅದ್ಭುತ ಅನಿಸೋ ಮತ್ತೊಂದು ಎಣ್ಣೆ ಸಾಂಗ್ ಸಿದ್ದವಾಗಿದೆ. ವಿಶೇಷ ಅಂದ್ರೆ ಈ ಬಾರಿ ಕೂಡ ಅದೇ ಭಟ್ಟರ ಪದಗುಚ್ಚ, ಅದೇ ಅರ್ಜುನ್ ಜನ್ಯ ಸಂಗೀತ, ಅದೇ ವಿಜಯ್ ಪ್ರಕಾಶ್ ಕಂಠ.
ಅಂದಹಾಗೆ ಈ ಹಾಡನ್ನ ಚಿತ್ರರಂಗದ ಘಟಾನುಘಟಿ ಸ್ಟಾರ್ಸ್ ಹಾಗೂ ಸ್ಟಾರ್ ಫಿಲ್ಮ್ ಮೇಕರ್ಸ್ ಕೇಳಿ ಥ್ರಿಲ್ ಆಗಿದ್ದಾರೆ. ಯಶ್, ಪುನೀತ್, ಶ್ರೀಮುರಳಿ, ಉಪೇಂದ್ರ ಹೀಗೆ ಇಡೀ ಗಾಂಧಿನಗರವೇ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಲ್ಲದೆ, ಅವ್ರದ್ದೇ ಶೈಲಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಕಟಕವಿ ಭಟ್ಟರ ಪದಪುಂಜವೇ ಹಾಗೆ. ನಮ್ಮ ಸುತ್ತಮುತ್ತ ನಡೆಯುವ ವಿಚಾರಗಳನ್ನೇ ತುಂಬಾ ಸ್ವಾಭಾವಿಕವಾಗಿ ಆಡುಭಾಷೆಯಲ್ಲಿ ಹಾಡಾಗಿ ಬರೆಯೋ ಜಾಯಮಾನ ಅವರದ್ದು. ಈ ಬಾರಿ ಕೂಡ ಕುಡುಕರಿಗೆ ಬೊಂಬಾಟ್ ಗಿಫ್ಟ್ ಕೊಟ್ಟಿದ್ದಾರೆ. ಅದಕ್ಕೆ ಅರ್ಜುನ್ ಜನ್ಯ, ವಿಪಿ ಕೂಡ ಕೈಜೋಡಿಸಿರೋದು ಮೆಚ್ಚಲೇಬೇಕು.
ತರುಣ್ ಶಿವಪ್ಪ ನಿರ್ಮಾಣದಲ್ಲಿ ತಯಾರಾಗ್ತಿರೋ ವಿಕ್ಟರಿ - 2ಗೆ ‘ಅಲೆಮಾರಿ‘ ಸಂತು ಆ್ಯಕ್ಷನ್ ಕಟ್ ಹೇಳಿದ್ದು, ಕಾಲೇಜ್ ಕುಮಾರ ನಂತ್ರ ಮತ್ತೊಂದು ಬ್ಲಾಕ್ ಬಸ್ಟರ್ ಕೊಡೋಕೆ ಸಜ್ಜಾಗಿದ್ದಾರೆ. ಸದ್ಯ ಎಣ್ಣೆ ಸಾಂಗ್ ಸಖತ್ ವೈರಲ್ ಆಗ್ತಿದ್ದು, ಯೂಟ್ಯೂಬ್ನಲ್ಲಿ ನಂಬರ್ ಒನ್ ಟ್ರೆಂಡಿಂಗ್ನಲ್ಲಿದೆ. ಒಟ್ಟಾರೆ ಟೀಸರ್ ಮತ್ತು ಸಾಂಗ್ಸ್ನಿಂದ ಸೌಂಡ್ ಮಾಡ್ತಿರೋ ‘ವಿಕ್ಟರಿ- 2‘ ಸದ್ಯದಲ್ಲೇ ನಿಮ್ಮ ಹತ್ತಿರದ ಥಿಯೇಟರ್ಗಳಿಗೆ ಲಗ್ಗೆ ಇಡಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5