6 ಮಕ್ಕಳ ತಾಯಿ, 414 ಪದಕಗಳ ಒಡತಿ!

8ನೇ ವರ್ಷವಿದ್ದಾಗ ಓಡಲು ಆರಂಭಿಸಿದ ಆಕೆಗೀಗ 87 ವರ್ಷ. 6 ಮಕ್ಕಳ ತಾಯಿ. ಇಲ್ಲಿಯವರೆಗೂ 414 ಪದಕಗಳನ್ನು ಗೆದ್ದಿದ್ದು ಇದರಲ್ಲಿ 354 ಚಿನ್ನದ ಪದಕಗಳು! ಇಂತಹ ಮಹಾನ್ ಸಾಧನೆ ಮಾಡಿದ್ದರೂ ತೆರೆಮರೆಯ ಕಾಯಿಯಾಗಿಯೇ ಉಳಿದ ಈಕೆಯ ಹೆಸರು ಡೈಸಿ ವಿಕ್ಟರ್!
ಡೈಸಿ ವಿಕ್ಟರ್ ಇದುವರೆಗೂ ಒಟ್ಟಾರೆ 20 ಅಂತಾರಾಷ್ಟ್ರಿಯ, 36 ರಾಷ್ಟ್ರೀಯ ಹಾಗೂ 59 ಜಿಲ್ಲಾ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ. ವಯಸ್ಸಾಗಿದೆ ಇನ್ನಾದರೂ ಮನೆಯಲ್ಲಿ ವಿಶ್ರಾಂತಿ ತಗೊ ಎಂದು ಕುಟುಂಬದವರು ಸಲಹೆ ನೀಡಿದರೂ ಈಕೆ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಮುಂದುವರಿಸಿದ್ದಾರೆ. ಬೆಳಗ್ಗೆ 7.30ರಿಂದ 9.30ರವರೆಗೆ ಪ್ರತಿನಿತ್ಯ ಅಭ್ಯಾಸ ಮಾಡುತ್ತಲೇ ಇದ್ದಾರೆ.
ಬೆಳಗ್ಗೆ ಕಾಫಿ –ತಿಂಡಿ ಸೇವಿಸಿದ ನಂತರ ಸಮೀಪದ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಮೈದಾನದಲ್ಲಿ ಅಭ್ಯಾಸ ಮಾಡುತ್ತೇನೆ. 11 ಗಂಟೆ ಸುಮಾರಿಗೆ ಹಿಂತಿರುಗುತ್ತೇನೆ ಎಂದು ಡೈಸಿ ವಿಕ್ಟರ್ ತಮ್ಮ ದೈನಂದಿನ ಅಭ್ಯಾಸ ವಿವರಿಸಿದರು.
1952ರಲ್ಲಿ ಮದ್ರಾಸ್ ಟೆಲಿಫೋನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕ್ರೀಡಾಪಟುವಾಗುವ ಅಭ್ಯಾಸ ಕಂಡು ಪ್ರತಿ ದಿನ 4 ಗಂಟೆಗಳ ಅಭ್ಯಾಸ ಮಾಡಲು ವಿಶೇಷ ಅನುಮತಿ ನೀಡಲಾಗಿತ್ತು. ಅಲ್ಲಿಂದ ಪ್ರತಿ ಟೂರ್ನಿಯಲ್ಲೂ ಪಾಲ್ಗೊಂಡು ಪದಕ ಗೆಲ್ಲಲು ಆರಂಭಿಸಿದೆ. 1956ರಲ್ಲಿ ಮದುವೆ ಆಯಿತು. 10 ವರ್ಷಗಳ ಅಂತರದಲ್ಲಿ 6 ಮಕ್ಕಳು ಆಯಿತು. ಈ ಅವಧಿಯಲ್ಲಿ ಕೂಡ ನಾನು ವಿಶ್ರಾಂತಿ ಪಡೆಯದೇ ಅಭ್ಯಾಸ ಮುಂದುವರಿಸಿದ್ದೆ ಎಂದು ಡೈಸಿ ಹೇಳುತ್ತಾರೆ.
ಮಿಲ್ಖಾ ಸಿಂಗ್ ಅವರಿಂದ ಸ್ಫೂರ್ತಿ ಪಡೆದ ಡೈಸಿ, ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಮಿಲ್ಖಾ ಸಿಂಗ್ ಮದ್ರಾಸ್ಗೆ ಭೇಟಿ ನೀಡಿದ್ದಾಗ ಕ್ರೀಡೆಯಲ್ಲಿ ಮುಂದುವರಿಯುವ ಆಸಕ್ತಿ ವ್ಯಕ್ತಪಡಿಸಿದಾಗ ಅದಕ್ಕೆ ಬೆನ್ನು ತಟ್ಟಿದ್ದರು.
ಕೆಲವು ವರ್ಷಗಳ ಹಿಂದೆ ಪತಿ ತೀರಿಕೊಂಡಾಗ ಕೆಲವು ಸಮಯ ಕ್ರೀಡೆಯಿಂದ ದೂರ ಉಳಿದಿದ್ದ ಡೈಸಿ ವಿಕ್ಟರ್, ಇದೀಗ ಮತ್ತೆ ಕ್ರೀಡೆಗೆ ಮರಳಿದ್ದಾರೆ. ಓಟ, ಟ್ರಿಪಲ್ ಜಂಪ್, ಲಾಂಗ್ ಜಂಪ್ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸುವುದು ನನಗೆ ಇಷ್ಟ. ಆದರೆ ಇತ್ತೀಚೆಗೆ ಟ್ರಿಪಲ್ ಜಂಪ್ ಮತ್ತು ಲಾಂಗ್ ಜಂಪ್ ನಿಂದ ದೂರ ಸರಿದಿದ್ದೇನೆ ಎಂದು ಡೈಸಿ ಹೇಳಿದರು.