Top

ಬೇಸಿಗೆ ಮೊದಲೇ ರಾಜ್ಯದಲ್ಲಿ ಬರಗಾಲ : ಸಚಿವರ ಸೂಕ್ತ ಕ್ರಮದ ನಿರ್ಧಾರ

ಬೇಸಿಗೆ ಮೊದಲೇ ರಾಜ್ಯದಲ್ಲಿ ಬರಗಾಲ : ಸಚಿವರ ಸೂಕ್ತ ಕ್ರಮದ ನಿರ್ಧಾರ
X

ಬೇಸಿಗೆ ಮುನ್ನವೇ ರಾಜ್ಯದಲ್ಲಿ ಬರಗಾಲದ ಛಾಯೆ ಆರಂಭವಾಗಿದೆ. ಜನ, ಜಾನುವಾರುಗಳಿಗೆ ನೀರಿಗೆ ಕೊರತೆ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ವಿ ದೇಶಪಾಂಡೆ, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸೂಕ್ತ ಕ್ರಮ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ.

ಬೇಸಿಗೆ ಮೊದಲೇ ರಾಜ್ಯದಲ್ಲಿನ ನೀರಿನ ಆಹಾಕಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ಬರಪೀಡಿತ ತಾಲೂಕುಗಳಲ್ಲಿ ದನಕರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ಕೂಡ ಪಶುಸಂಗೋಪನಾ ಇಲಾಖೆಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯ ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳು ಗೋ ಶಾಲೆಯನ್ನು ತೆರೆಯಲು ಅವಕಾಶವಿದೆ ಎಂದು ವಿವರಿಸಿದರು.

ಕುಡಿಯುವ ನೀರಿನ ಕೊರತೆ ಇರುವೆಡೆ ಟ್ಯಾಂಕರ್ ಮೂಲಕ, ಇಲ್ಲವೇ ಖಾಸಗೀ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ನೀರನ್ನು ಪೂರೈಸಬೇಕು. ಇದಕ್ಕಾಗಿ, ಖಾಸಗಿ ಕೊಳವೆಬಾವಿಗಳ ಮಾಲೀಕರಿಗೆ ಹಣ ಪಾವತಿಸಲಾಗುವುದು. ಸದ್ಯಕ್ಕೆ ರಾಜ್ಯದ 13 ಜಿಲ್ಲೆಗಳ 352 ಹಳ್ಳಿಗಳಿಗೆ ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಸಚಿವ ಆರ್‌ ವಿ ದೇಶಪಾಂಡೆ ಹೇಳಿದರು.

ಇನ್ನೂ ಎಲ್ಲಾ ಜಿಲ್ಲಾಧಿಕಾರಿಗಳೂ ಬೆಳೆ ನಷ್ಟ ಕುರಿತು ತಮ್ಮ ಅಂತಿಮ ವರದಿಯನ್ನು, ಒಂದು ವಾರದಲ್ಲಿ ಸಲ್ಲಿಸಬೇಕು. ಈ ವರದಿ ಬಂದಕೂಡಲೇ ಈ ಸಂಬಂಧ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿ, ಪರಿಹಾರಕ್ಕಾಗಿ ಕೋರಲಾಗುವುದು. ರಾಜ್ಯದಲ್ಲಿ ಈ ವರ್ಷ ಮಳೆಯ ಆರ್ಭಟಕ್ಕೆ ಸಿಲುಕಿ 188 ಮಂದಿ ಅಸುನೀಗಿದ್ದು, 18 ಮಂದಿ ಗಾಯಗೊಂಡಿದ್ದಾರೆ.

ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಈ ಜೀವಹಾನಿ ಪ್ರಕರಣಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಒಟ್ಟು 3.85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳು ಪ್ರಧಾನಮಂತ್ರಿ ಮೋದಿಯವರನ್ನು ರಾಜ್ಯ ನಿಯೋಗ ಭೇಟಿ ಮಾಡಿದ ಸಂದರ್ಭದಲ್ಲಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು ಎಂದರು.

ಮಳೆಯಿಂದಾಗಿ ಜೀವಹಾನಿ ಆದ 188 ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಎಸ್.ಡಿ.ಆರ್.ಎಫ್ ನಡಿ ತಲಾ 4 ಲಕ್ಷ ರೂ. ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ತಲಾ 1 ಲಕ್ಷ ರೂ. ಒಟ್ಟು 5 ಲಕ್ಷ ರೂ. ಪರಿಹಾರ ವಿತರಿಸಿದೆ. ಈಗ ಕೇಂದ್ರ ಸರಕಾರವು ಕೂಡ ತಲಾ 2 ಲಕ್ಷ ಕೊಡುತ್ತಿರುವುದರಿಂದ ಈ ಪರಿಹಾರ ಮೊತ್ತ ತಲಾ 7 ಲಕ್ಷ ರೂ. ಆದಂತಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ವಿವರಿಸಿದರು.

Next Story

RELATED STORIES