Top

ಪಂಚರಾಜ್ಯದಲ್ಲಿ ಕೈ ಮೇಲು, ಬಿಜೆಪಿಗೆ ಮುಳ್ಳು: ಎಬಿಪಿ ಸಮೀಕ್ಷೆ

ಪಂಚರಾಜ್ಯದಲ್ಲಿ ಕೈ ಮೇಲು, ಬಿಜೆಪಿಗೆ ಮುಳ್ಳು: ಎಬಿಪಿ ಸಮೀಕ್ಷೆ
X

2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಲಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಢದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌ ನಡೆಸಿದ ಜನಮತ ಸಮೀಕ್ಷೆ ಹೇಳಿದೆ.

ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಿದೆ. ಈ ಬೆನ್ನಲ್ಲೇ ಐದು ರಾಜ್ಯಗಳಲ್ಲಿ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಹಣಾಹಣಿ ನಡೆಯಲಿದೆ. ಈಗಾಗಲೇ ಉಭಯ ಪಕ್ಷದ ನಾಯಕರು ಚುನಾವಣಾ ಪ್ರಚಾರವೂ ಶುರು ಮಾಡಿದ್ದಾರೆ. ಈ ಮಧ್ಯೆ, ಎಬಿಪಿ ನ್ಯೂಸ್ ಎಂಬ ಖಾಸಗಿ ಸುದ್ದಿವಾಹಿನಿ ಚುನಾವಣಾಪೂರ್ವ ಸಮೀಕ್ಷೆ ನಡೆಸಿ ಬಿಜೆಪಿಗೆ ಆಘಾತಕಾರಿ ಸುದ್ದಿ ನೀಡಿದೆ. ಐದು ರಾಜ್ಯಗಳ ಪೈಕಿ ಬಿಜೆಪಿ ಆಡಳಿತದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​​ ಗೆಲುವು ಸಾಧಿಸಲಿದೆ.

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಚತ್ತೀಸ್​​ಗಢದಲ್ಲಿ ಕಾಂಗ್ರೆಸ್ ಜಯ ಗಳಿಸಲಿದ್ದು, ಬಿಜೆಪಿ ಸೋಲು ಅನುಭವಿಸಲಿದೆ ಎಂದು ಎಬಿಪಿ ನ್ಯೂಸ್ ನಡೆಸಿದ ಜನಮತ ಸಮೀಕ್ಷೆಯಲ್ಲಿ ಬಯಲಾಗಿದೆ. ಹೀಗಾಗಿ, ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿದ್ದ ಕೈಪಾಳಯದ ಕನಸು ಶೀಘ್ರದಲ್ಲೇ ನನಸಾಗಲಿದೆ.

ವಸುಂಧರರಾಜೇಗೆ ಮುಖಭಂಗ

2013ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ನಗೆ ಬೀರಿತ್ತು. ಆದರೆ, ಈ ಬಾರಿ ರಾಜಸ್ಥಾನದ ಒಟ್ಟು 200 ಸ್ಥಾನಗಳ ಪೈಕಿ 142 ಸ್ಥಾನ ಕಾಂಗ್ರೆಸ್‌ ಪಾಲಾಗಲಿವೆ. ಬಿಜೆಪಿ ಸಂಖ್ಯಾಬಲ 56ಕ್ಕೆ ಕುಸಿಯಲಿದೆ. ಅಲ್ಲದೇ, ಎರಡು ಸ್ಥಾನ ಇತರೆ ಪಕ್ಷಗಳ ಪಾಲಾಗಲಿವೆ. ಈ ಮೂಲಕ ಬಿಜೆಪಿ ನಾಯಕಿ ವಸುಂಧರರಾಜೇ ಅರಸ್ ನೇತೃತ್ವದಲ್ಲಿ ಎರಡನೇ ಬಾರಿ ಮತ್ತೆ ಅಧಿಕಾರಕ್ಕೇರುವುದು ಅಸಾಧ್ಯ. ಈ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯಗೊಳ್ಳಲಿದೆ ಎಂದು ಸಮೀಕ್ಷೆ ವಿವರಿಸಿದೆ. ಮತ ಹಂಚಿಕೆಯಲ್ಲಿ ಕಾಂಗ್ರೆಸ್‌ ಶೇ.50ರಷ್ಟು ಮುಂದಿರಲಿದ್ದು, ಬಿಜೆಪಿ ಶೇ.34ಕ್ಕೆ ತೃಪ್ತಿಪಡೆಯಲಿದೆ.

ಮತ್ತೆ ಕೈ’ ಹಿಡಿತಕ್ಕೆ ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಒಟ್ಟು 230 ಕ್ಷೇತ್ರಗಳಿವೆ. ಇಷ್ಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಈ ಪೈಕಿ ಬಿಜೆಪಿಗೆ ಕೇವಲ 108 ಸೀಟು ದಕ್ಕಲಿದೆ. ಕಾಂಗ್ರೆಸ್ ಮಾತ್ರ 122 ಸೀಟು ಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆಯಲಿದೆ. ಹೀಗಾಗಿ, ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಂಡಿರುವ ಕನಸು ನುಚ್ಚು ನೂರಾಗಲಿದೆ. ಮತಹಂಚಿಕೆ ಪ್ರಮಾಣದಲ್ಲಿ ಎರಡೂ ಪಕ್ಷಗಳ ನಡುವೆ ಶೇಕಡ 0.7ರಷ್ಟು ಮಾತ್ರ ವ್ಯತ್ಯಾಸವಿರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಚತ್ತೀಸ್‌ಗಢದಲ್ಲಿ ಹಿನ್ನಡೆ

ಚತ್ತೀಸ್​​ಗಢದಲ್ಲಿ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿವೆ. ಕಾಂಗ್ರೆಸ್ ಮತ್ತು ಆಡಳಿತರೂಢ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. 90 ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಕಾಂಗ್ರೆಸ್ 47, ಬಿಜೆಪಿಗೆ 40 ಮತ್ತು ಇತರ ಪಕ್ಷಗಳು 3 ಸ್ಥಾನ ಪಡೆಯಲಿವೆ.

ಈ ಬಾರಿ ಕಮಲ ಎಷ್ಟೇ ಪ್ರಯತ್ನಿಸಿದರೂ ಅರಳುವ ಸಾಧ್ಯತೆ ಕಡಿಮೆ. ಇಲ್ಲೂ ಕಾಂಗ್ರೆಸ್‌ - ಬಿಜೆಪಿ ನಡುವೆ ಮತ ಹಂಚಿಕೆ ಕೇವಲ ಶೇಕಡ 0.3ರಷ್ಟು ಮಾತ್ರ ವ್ಯತ್ಯಾಸವಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಆದರೆ, ಸಮೀಕ್ಷೆ ನುಡಿದಿರುವ ಭವಿಷ್ಯ ನಿಜವಾಗುತ್ತೋ, ಸುಳ್ಳಾಗುತ್ತೋ ಎಂಬುದು ಖಾತ್ರಿಯಾಗಲು ಡಿಸೆಂಬರ್​​ 11ಕ್ಕೆ ಪ್ರಕಟವಾಗುವ ಫಲಿತಾಂಶದವರೆಗೂ ಕಾಯಬೇಕಿದೆ.

ಕೇಂದ್ರದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ

ಪಂಚ ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೂ, ಲೋಕಸಭೆ ಚುನಾವಣೆಯಲ್ಲಿ ಮಾತ್ರ ನರೇಂದ್ರ ಮೋದಿಯದ್ದೇ ಪಾರುಪತ್ಯ. ಪ್ರಧಾನಿ ಪಟ್ಟಕ್ಕೆ ರಾಹುಲ್​​ ಚುನಾಯಿಸಲು ಮತದಾರರು ಹಿಂದೇಟು ಹಾಕಲಿದ್ದಾರೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಮೋದಿ ವರ್ಸಸ್​​​ ರಾಹುಲ್ ಎಂಬ ಯಾವುದೇ ಸ್ಪರ್ಧೆ ಇಲ್ಲ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

Next Story

RELATED STORIES