Top

ಚೊಚ್ಚಲ ಪಂದ್ಯದಲ್ಲೇ ಶತಕ: ದಾಖಲೆ ಬರೆದ ಪೃಥ್ವಿ ಶಾ

ಚೊಚ್ಚಲ ಪಂದ್ಯದಲ್ಲೇ ಶತಕ: ದಾಖಲೆ ಬರೆದ ಪೃಥ್ವಿ ಶಾ
X

ಮುಂಬೈನ ಪೋರ ಪೃಥ್ವಿ ಶಾ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ 18 ವರ್ಷ 329 ದಿನ ಆಗಿರುವ ಪೃಥ್ವಿ ಶಾ ಶತಕ ಸಿಡಿಸಿದರು. ಈ ಮೂಲಕ ಈ ಸಾಧನೆ ಮಾಡಿದ ಸಚಿನ್ ತೆಂಡುಲ್ಕರ್ ನಂತರದ ಎರಡನೇ ಕಿರಿಯ ಭಾರತೀಯ ಎನಿಸಿಕೊಂಡರು.

ಸಚಿನ್ ತೆಂಡುಲ್ಕರ್ 17 ವರ್ಷ 107 ದಿನದಲ್ಲಿ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ನಲ್ಲಿ 1990 ರಂದು ನಡೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಚಿನ್ ಮೊದಲ ಟೆಸ್ಟ್ ನಲ್ಲೇ 109 ರನ್ ಸಿಡಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದ ಪೃಥ್ವಿ ಶಾ ಆಡುವ ಅವಕಾಶವನ್ನೇ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ ಆರಂಭಗೊಂಡ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದರು. ಈ ಅವಕಾಶವನ್ನು ಕೈ ತುಂಬಾ ಬಾಚಿಕೊಂಡ ಪೃಥ್ವಿ ಶಾ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆಯೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು.

ಪೃಥ್ವಿ ಶಾ ಸಾಧನೆಗೆ ವೀರೇಂದ್ರ ಸೆಹ್ವಾಗ್, ಮೊಹಮದ್ ಕೈಫ್ ಸೇರಿದಂತೆ ಹಲವಾರು ದಿಗ್ಗಜರು ಟ್ವೀಟರ್​ನಲ್ಲಿ ಶುಭ ಕೋರಿದ್ದಾರೆ. ಇದು ಆರಂಭ ಮಾತ್ರ, ಈ ಹುಡುಗನಲ್ಲಿ ಇನ್ನೂ ಧಂ ಇದೆ ಎಂದಿದ್ದಾರೆ.

ಕೆ.ಎಲ್​.ರಾಹುಲ್ ಖಾತೆ ತೆರೆಯುವ ಮುನ್ನವೇ ಔಟಾದ ನಂತರ ಚೇತೇಶ್ವರ್ ಪೂಜಾರ ಜೊತೆಗೂಡಿದ ಪೃಥ್ವಿ ಶಾ, 2ನೇ ವಿಕೆಟ್​ಗೆ 206 ರನ್ ಜೊತೆಯಾಟ ನಿಭಾಯಿಸಿ ವಿಂಡೀಸ್ ಬೌಲರ್ ಗಳನ್ನು ಗೋಳು ಹೋಯ್ದುಕೊಂಡರು. 99 ಎಸೆತಗಳಲ್ಲಿ ಶತಕ ಪೂರೈಸಿದ ಪೃಥ್ವಿ ಶಾ, 154 ಎಸೆತಗಳಲ್ಲಿ 19 ಬೌಂಡರಿ ಸೇರಿದ 134 ರನ್ ಬಾರಿಸಿದ್ದಾಗ ಬಿಶೂ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್ ಆಗಿ ನಿರ್ಗಮಿಸಿದರು.

Next Story

RELATED STORIES