Top

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ನಿಖಿಲ್..?

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ನಿಖಿಲ್..?
X

ಮಂಡ್ಯ: ಮಂಡ್ಯ ಲೋಕಸಭೆಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ಕಳೆದ 6 ತಿಂಗಳಿನಿಂದ ನಿಖಿಲ್ ಆಗಾಗ ಮಂಡ್ಯಕ್ಕೆ ಭೇಟಿ ನೀಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ಮೊನ್ನೆ ಮಂಡ್ಯದಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ನಿಖಿಲ್ ಭೇಟಿ ನೀಡಿದ್ದು, ಈ ಹಿಂದೆ ರೈತರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಮಂಡ್ಯಕ್ಕೆ ಭೇಟಿ ನೀಡಿದ್ದರು.

ಕೆಲ ದಿನಗಳ ಹಿಂದೆ ಮಂಡ್ಯ ಕ್ಷೇತ್ರಕ್ಕೆ ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಹೆಸರು ಸಹ ಚಾಲ್ತಿಗೆ ಬಂದಿತ್ತು. ಆದ್ರೆ ಇದೀಗ ನಿಖಿಲ್ ಕುಮಾರ್ ಹೆಸರು ಕೇಳಿ ಬರುತ್ತಿದ್ದು, ಸೆಲೆಬ್ರಿಟಿಗಳನ್ನು ಕಣಕ್ಕಿಳಿಸಿದರೆ ಗೆಲುವು ಸುಲಭ ಎಂಬುದು ಜೆಡಿಎಸ್ ಲೆಕ್ಕಾಚಾರವಾಗಿದೆ.

ಮಂಡ್ಯ ಲೋಕಸಭೆಗೆ ನಡೆದಿರುವ ಕಳೆದ ಆರು ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಚುನಾವಣೆಯಲ್ಲಿ ಸೆಲೆಬ್ರಿಟಿಗಳೇ ಗೆದ್ದಿದ್ದು, ಮೂರು ಬಾರಿ ಅಂಬರೀಶ್ ಮತ್ತು ಒಂದು ಬಾರಿ ರಮ್ಯಾ ಮಂಡ್ಯ ಕ್ಷೇತ್ರದ ಸಂಸದರಾಗಿದ್ದಾರೆ.

ಇನ್ನು ಮಂಡ್ಯಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಅನಿವಾರ್ಯ ಬಿದ್ದರೆ ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ. ಚುನಾವಣೆಗೆ ಸ್ಪರ್ಧಿಸಿದರೆ ಸಿನಿಮಾ, ರಾಜಕಾರಣ ಎರಡನ್ನೂ ನೋಡಿಕೊಂಡು ಹೋಗ್ತೇನೆ ಎಂದಿದ್ದಾರೆ.

ಮಂಡ್ಯದಿಂದ ನಿಖಿಲ್, ಪ್ರಜ್ವಲ್ ಯಾರು ಸ್ಪರ್ಧಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಿಖಿಲ್, ನಮ್ಮ ತಂದೆ ಹಾಗೂ ಜೆಡಿಎಸ್ ಪಕ್ಷ ನನ್ನ, ಪ್ರಜ್ವಲ್ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾನು ಬದ್ಧ ಎಂದಿದ್ದಾರೆ.

ಪಕ್ಷದ ನಾಯಕರ ತೀರ್ಮಾನ, ಕಾರ್ಯಕರ್ತರ ಸಲಹೆಯಂತೆ ನಾನು ನಡೆದುಕೊಳ್ಳುತ್ತೇನೆ. ಮಂಡ್ಯದಲ್ಲಿ ಸ್ಪರ್ಧೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ನಾನು ಮಂಡ್ಯದಿಂದ, ನನ್ನ ತಮ್ಮ ಪ್ರಜ್ವಲ್ ಮೈಸೂರಿನಿಂದ ಸ್ಪರ್ಧಿಸುತ್ತಾರೆಂದು ಸುದ್ದಿಯಾಗಿದೆ. ನಮ್ಮ ರಕ್ತದ ಕಣಕಣದಲ್ಲಿ ರಾಜಕೀಯ ಇದೆ. ನಮ್ಮ ಕುಟುಂಬವನ್ನು ಪ್ರೀತಿಸುವವರು ಇದ್ದಾರೆ ಎಂದು ಹೇಳಿದ್ದಾರೆ.

Next Story

RELATED STORIES