Top

637 ಕೋಟಿ ಮೌಲ್ಯದ ನೀರವ್ ಮೋದಿ ಆಸ್ತಿ ಜಪ್ತಿ

637 ಕೋಟಿ ಮೌಲ್ಯದ ನೀರವ್ ಮೋದಿ ಆಸ್ತಿ ಜಪ್ತಿ
X

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13000 ಕೋಟಿ ರೂ. ವಂಚಿಸಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ದೇಶ- ವಿದೇಶಗಳಲ್ಲಿರುವ ಸುಮಾರು 637 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಭಾರತದ ತನಿಖಾ ಸಂಸ್ಥೆಗಳು ಜಪ್ತಿ ಮಾಡಿಕೊಂಡಿದೆ.

ಭಾರತ, ಅಮೆರಿಕ, ಲಂಡನ್, ಹಾಂಕಾಂಗ್​ನಲ್ಲಿದ್ದ ನೀರವ್ ಮೋದಿ ಅವರ ಐಷಾರಾಮಿ ಅಪಾರ್ಟ್​ಮೆಂಟ್, ವಜ್ರದ ಆಭರಣಗಳು, ಬ್ಯಾಂಕ್​ಗಳಲ್ಲಿ ಇರಿಸಿದ್ದ ನಗದು ಹಾಗೂ ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನಕಲಿ ಭದ್ರತೆಗಳನ್ನು ಇರಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ. ವಂಚಿಸಿದ ವಜ್ರದ ವ್ಯಾಪಾರಿ ನೀರವ್ ಮೋದಿ ಪ್ರಸ್ತುತ ಲಂಡನ್​ನಲ್ಲಿ ತಲೆಮರೆಸಿಕೊಂಡಿದ್ದಾರೆ. ಇಷ್ಟು ದೊಡ್ಡದ ಮೊತ್ತವನ್ನು ಲಂಡನ್​ನಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಭಾರತದ ತನಿಖಾ ಸಂಸ್ಥೆಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರ ಆಸ್ತಿಯನ್ನು ವಿದೇಶದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವುದು ಇದು ಅಪರೂಪದ ಪ್ರಕರಣ. ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರ ಇನ್ನಷ್ಟು ಆಸ್ತಿಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಹಾಂಕಾಂಗ್​ನಲ್ಲಿ ಇರಿಸಿದ್ದ 22.69 ಕೋಟಿ ರೂ. ಮೌಲ್ಯದ ವಜ್ರದ ಆಭರಣಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 86 ಕೋಟಿ ಆಗಿದ್ದರೂ ಬ್ಯಾಂಕ್​ಗಳ ಪ್ರಕಾರ 22.69 ಕೋಟಿ ಆಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಲಂಡನ್​ನ ವಶಪಡಿಸಿಕೊಂಡ ಅಪಾರ್ಟ್​ಮೆಂಟ್ ಮೌಲ್ಯ 6.5 ದಶಲಕ್ಷ ಪೌಂಡ್ ಅಂದರೆ ಸುಮಾರು 57 ಕೋಟಿ ರೂ. ಆಗಿದೆ. ಇದು ನೀರವ್ ಮೋದಿ ಅವರ ಸೋದರಿ ಪೂರ್ವಿ ಮೋದಿ ಹೆಸರಿನಲ್ಲಿದೆ.

ನ್ಯೂಯಾರ್ಕ್​ನ ಸೆಂಟ್ರಲ್ ಬ್ಯಾಂಕ್ ಪ್ರದೇಶದಲ್ಲಿರುವ 2 ಐಷಾರಾಮಿ ಅಪಾರ್ಟ್​ಮೆಂಟ್ ಜಪ್ತಿ ಮಾಡಲಾಗಿದ್ದು, ಇದರ ಮೌಲ್ಯ 216 ಕೋಟಿ ಹಾಗೂ 4.99 ಕೋಟಿ ರೂ. ಆಗಿದೆ. ಇದು ನೀರವ್ ಮೋದಿ ಅವರ ಪತ್ನಿ ಅಮಿ ಮೋದಿ ಹೆಸರಿನ ಇಟಾಚಾ ಟ್ರಸ್ಟ್ ಹೆಸರಿನಲ್ಲಿತ್ತು.

ದಕ್ಷಿಣ ಮುಂಬೈನಲ್ಲಿ ಪೂರ್ವಿ ಮೋದಿ ಹೆಸರಿನಲ್ಲಿದ್ದ 19.5 ಕೋಟಿ ರೂ. ಮೌಲ್ಯದ ಫ್ಲ್ಯಾಟ್, 5 ಬ್ಯಾಂಕ್​ ಅಕೌಂಟ್​ಗಳಲ್ಲಿದ್ದ 278 ಕೋಟಿ ರೂ. ನಗದು, ವಜ್ರದ ಆಭರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟಾರೆ ಮೌಲ್ಯ 674 ಕೋಟಿ ರೂ. ಆಗಿದೆ ಎಂದು ಅಧಿಕಾರಿಗಳು ವಿವರಿಸಿದರು.

Next Story

RELATED STORIES