ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ : ಸುನಾಮಿಯ ಅಬ್ಬರ

ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.5ರಷ್ಟು ದಾಖಲಾಗಿದೆ.

ಪ್ರಬಲ ಭೂ ಕಂಪನದ ಬಳಿಕ ಪಾಲು ನಗರಕ್ಕೆ ಸುನಾಮಿ ಅಪ್ಪಳಿಸಿದೆ. ಸೆಂಟ್ರಲ್ ಸುಲಾವೆಸಿ ಪಟ್ಟಣದಿಂದ ಈಶಾನ್ಯಕ್ಕೆ 56 ಕಿಲೋ ಮೀಟರ್‌ ದೂರ ಹಾಗೂ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಇಂದು ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು, ಅನೇಕ ಮನೆಗಳು ಕುಸಿದಿವೆ. ಇದಕ್ಕೂ ಮೊದಲೇ ಬೆಳಿಗ್ಗೆ ಸಂಭವಿಸಿದ ಭೂಕಂಪದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿತ್ತು.

ಭೂಕಂಪದಿಂದ ಒಬ್ಬ ವ್ಯಕ್ತಿ ಮೃತಪಟ್ಟು, 10 ಜನರಿಗೆ ಗಂಭೀರ ಗಾಯವಾಗಿದೆ. 2004ರಲ್ಲಿ ಇಂಡೋನೇಷಿಯಾ ಸುಮಾತ್ರಾ ದ್ವೀಪದ ಬಳಿ ಸಂಭವಿಸಿದ್ದ ಭೀಕರ ಭೂಕಂಪದಿಂದ ಸುನಾಮಿ ಸೃಷ್ಟಿಯಾಗಿತ್ತು.

ಭಾರತ ಸೇರಿ ಸುತ್ತಮುತ್ತಲ ರಾಷ್ಟ್ರಗಳಲ್ಲಿ ಸುಮಾರು ಎರಡು ಲಕ್ಷ ಮಂದಿ ಸಾವಿಗೀಡಾಗಿದ್ದರು.