ಪಾಕಿಸ್ತಾನಕ್ಕೆ ಆಘಾತ: ಭಾರತ- ಬಾಂಗ್ಲಾ ಫೈನಲ್ ಫೈಟ್

ಶತಕ ವಂಚಿತ ಮುಷ್ಫಿಕರ್ ರಹೀಂ ಹಾಗೂ ಮುಸ್ತಫಿಜುರ್ ರೆಹಮಾನ್ ಅವರ ಮಾರಕ ದಾಳಿ ನೆರವಿನಿಂದ ಬಾಂಗ್ಲಾದೇಶ 37 ರನ್ಗಳಿಂದ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿದೆ. ಶುಕ್ರವಾರ ನಡೆಯುವ ಫೈನಲ್ನಲ್ಲಿ ಅಜೇಯ ಭಾರತ ತಂಡವನ್ನು ಬಾಂಗ್ಲಾ ಎದುರಿಸಲಿದೆ.
ಬುಧವಾರ ತಡರಾತ್ರಿ ನಡೆದ ಸೂಪರ್-4 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 48.5 ಓವರ್ ಗಳಲ್ಲಿ 239 ರನ್ಗಳಿಗೆ ಆಲೌಟಾಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಾಕಿಸ್ತಾನ 50 ಓವರ್ ಪೂರೈಸಿದರೂ 9 ವಿಕೆಟ್ಗೆ 202 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಾಕಿಸ್ತಾನ ಪರ ಆರಂಭಿಕ ಇಮಾನುಲ್ಲಾ ಹಕ್ 83 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಅನುಭವಿ ಶೋಯೆಬ್ ಮಲಿಕ್ 30 ರನ್ ಬಾರಿಸಿದರೂ ಅವರ ವಿಕೆಟ್ ಪತನಗೊಳ್ಳುತ್ತಿದ್ಧಂತೆ ಪಾಕಿಸ್ತಾನ ಗೆಲುವಿನ ಹಾದಿಯಿಂದ ದೂರ ಸರಿಯಿತು. ಬಾಂಗ್ಲಾ ಪರ ಮುಸ್ತಫಿಜುರ್ ರೆಹಮಾನ್ 4 ವಿಕೆಟ್ ಪಡೆದು ಪಾಕ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು.
ಬಾಂಗ್ಲಾ 12 ರನ್ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತದಿಂದ ತತ್ತರಿಸಿತ್ತು. ಆದರೆ ಮುಷ್ಫಿಕರ್ ರಹೀಂ 118 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 99 ರನ್ ಬಾರಿಸಿದ್ದಾಗ ಔಟಾಗಿ 1 ರನ್ನಿಂದ ಶತಕ ವಂಚಿತರಾದರು.
ಮುಷ್ಫಿಕರ್ ರಹೀಂ ಮತ್ತು 60 ರನ್ ಬಾರಿಸಿದ ಮೊಹಮದ್ ಮಿಥುನ್ 4ನೇ ವಿಕೆಟ್ಗೆ 144 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಮುನ್ನಡೆಸಿದರು. ಇವರಿಬ್ಬರ ಪತನದ ನಂತರ ತಂಡ ಮತ್ತೊಮ್ಮೆ ಕುಸಿತಕ್ಕೆ ಒಳಗಾಯಿತು. ಪಾಕ್ ಪರ ಜುನೈದ್ ಖಾನ್ 4 ವಿಕೆಟ್ ಗಳಿಸಿದರು.
- ಸಂಕ್ಷಿಪ್ತ ಸ್ಕೋರ್
- ಬಾಂಗ್ಲಾದೇಶ 48.5 ಓವರ್ 239 (ಮುಷ್ಫಿಕರ್ ರಹೀಂ 99, ಮಿಥುನ್ 60, ಮೊಹಮದುಲ್ಲಾ 25, ಜುನೈದ್ 19/4, ಶಯೀನ್ 44/2, ಹಸನ್ 60/2).
- ಪಾಕಿಸ್ತಾನ 50 ಓವರ್ 9 ವಿಕೆಟ್ 202 (ಇಮಾಮ್ 83, ಮಲಿಕ್ 30, ಆಸಿಫ್ 31, ಮುಸ್ತಫಿಜುರ್ 43/4, ಮೆಹದಿ 28/2).