ಭೀಕರ ಅಪಘಾತ: ಯೋಧ ಸೇರಿ ನಾಲ್ವರ ದುರ್ಮರಣ

ಕೋಲಾರ: ಕರ್ತವ್ಯಕ್ಕೆ ಮರಳುತ್ತಿದ್ದ ಭಾರತೀಯ ಯೋಧನನ್ನು ಬಿಳ್ಕೊಡಲು ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತಗೊಂಡು ಯೋಧ ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿ ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು, ಟಾಟಾಸುಮೋ ಹಾಗೂ ಇಂಡಿಕಾ ಕಾರು ನಡುವೆ ಡಿಕ್ಕಿಯಾಗಿ ಇಂಡಿಕಾ ಕಾರಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಉಳಿದ ನಾಲ್ವರಿಗೆ ಗಂಭೀರಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನ ಭರತ್ ಕುಮಾರ್, ರಿಗೋ, ಬಾಬು, ರಮೇಶ್ ಬಾಬು ಎಂದು ಗುರುತಿಸಲಾಗಿದ್ದು, ಮೃತರು ಕೆಜಿಎಫ್ ಪಟ್ಟಣದ ಚಾಂಪಿಯನ್ ರೀಪ್ ನಿವಾಸಿಗಳು ಎನ್ನಲಾಗಿದೆ. ತಡರಾತ್ರಿ ಕೆಜಿಎಫ್ನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ, ಕಿರಿದಾಗಿದ್ದ ರಸ್ತೆ ತಿರುವಿನಲ್ಲಿ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಭಾರತೀಯ ಸೇನೆ ಯೋಧ ಭರತ್ಕುಮಾರ್ ಮೃತರಲ್ಲಿ ಒಬ್ಬರಾಗಿದ್ದು, ಸೇನೆಯ ಕರ್ತವ್ಯಕ್ಕೆ ಮರಳಲು ಭರತ್ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳಿದ್ದರು. ಪೊಲೀಸರು ಮೃತದೇಹಗಳನ್ನು ಕೆಜಿಎಫ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಸಾವಿನ ಸುದ್ದಿ ಕೇಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.