Top

ಸದ್ಯಕ್ಕೆ 'ಆಪರೇಶನ್ ಕಮಲ'ಸೈಲೆಂಟ್ : ಬಿಜೆಪಿಯಿಂದ ಕಾದುನೋಡುವ ತಂತ್ರ!

ರಾಜ್ಯ ರಾಜಕೀಯದಲ್ಲಿ ಆಪರೇಶನ್ ಕಮಲದ ಸದ್ದು ಸ್ವಲ್ಪ ತಣ್ಣಗಾಗಿದೆ. ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮೇಲೆ ಬಿಜೆಪಿ ಹದ್ದಿನ ಕಣ್ಣಿಟ್ಟಿದೆ. ಸಂಪುಟ ವಿಸ್ತರಣೆ ಆಗೋವರೆಗೆ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಬಿಜೆಪಿ ನಂತರ ಅಸಲಿ ಆಟ ಶುರು ಮಾಡಲಿದೆ.

ಮೈತ್ರಿ ಸರ್ಕಾರ ಪತನಕ್ಕೆ ಮಹೂರ್ಥ ಫಿಕ್ಸ್ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪ ಸದ್ಯದಲ್ಲೇ ಬಿಜೆಪಿ ಸರ್ಕಾರ ರಚಿಸುತ್ತಾರೆ. ಇದಕ್ಕಾಗಿ ಸೈಲೆಂಟ್ ಆಗಿ ಒಳಗೊಳಗೆ ಆಪರೇಶನ್ ಕಮಲ ನಡೆಯುತ್ತಿದೆ ಎಂದೆಲ್ಲಾ ದೊಡ್ಡ ಚರ್ಚೆ ನಡೆದಿತ್ತು.

ರಾಜಕೀಯ ವಲಯದಲ್ಲಿ ಆಪರೇಶನ್ ಕಮಲ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆದರೆ ಸದ್ಯ ಆಪರೇಶನ್ ಕಮಲ ಸೈಲೆಂಟ್ ಆಗಿದೆ ಎನ್ನಲಾಗಿದೆ. ಬಿಜೆಪಿಯ ಆಪರೇಶನ್ ಕಮಲಕ್ಕೆ ಸೆಡ್ಡು ಹೊಡೆದ ದೋಸ್ತಿಗಳು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶ ಕಂಡಿದ್ದಾರೆ. ಇದರಿಂದ ಆಪರೇಶನ್ ಕಮಲಕ್ಕೆ ಹಿನ್ನಡೆ ಆದಂತಾಗಿದೆ ಹೀಗಾಗಿ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗುವ ವರೆಗೆ ಕಾಯ್ದು ನೋಡುವ ತಂತ್ರಕ್ಕೆ ಬಿ.ಎಸ್.ವೈ ಆಂಡ್ ಟೀಂ ಮೊರೆ ಹೋಗಿದೆ ಎನ್ನಲಾಗಿದೆ.

ಖಾಲಿ ಇರುವ 9 ಸಚಿವ ಸ್ಥಾನಗಳಿಗೆ ಸಚಿವಾಕಾಂಕ್ಷಿ ಶಾಸಕರ ಸಂಖ್ಯೆ ದೊಡ್ಡದೇ ಇದೆ. ಹೀಗಾಗಿ ಸಚಿವ ಸ್ಥಾನ ಸಿಗದವರು ಬಿಜೆಪಿಗೆ ಬರಬಹುದೆಂಬ ನಿರೀಕ್ಷೆ ಯಡಿಯೂರಪ್ಪನವರಲ್ಲಿ ಇದೆ ಎನ್ನಲಾಗಿದೆ. ಈಗಾಗಲೇ ಬಿಜೆಪಿಗೆ ಬರಲು ಸಿದ್ದವಿದ್ದ ಕೆಲ ಶಾಸಕರು ಕೈ ಕೊಟ್ಟಿದ್ದಾರೆ.

ಹೀಗಾಗಿ ಬಿಜೆಪಿ ಸರ್ಕಾರ ರಚನೆಗೆ ಪೂರಕ ವಾತಾವರಣ ಇಲ್ಲ. ಸಚಿವ ಸಂಪುಟ ವಿಸ್ತರಣೆ ಆದರೆ ಮತ್ತೆ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಖಚಿತ. ಭಿನ್ನಮತದ ಲಾಭ ಪಡೆದು ಸರ್ಕಾರ ರಚಿಸಬಹುದೆಂಬ ನಿರೀಕ್ಷೆಯಲ್ಲಿ ಯಡಿಯೂರಪ್ಪ ಇದ್ದಾರೆ ಎನ್ನಲಾಗಿದೆ.

ಯಾರು ಎಷ್ಟೇ ಸಮಾಧಾನ ಮಾಡಿದರೂ ಕೇಳುವ ವ್ಯವಧಾನದಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಆಗಲಿ. ಸಂಪುಟ ವಿಸ್ತರಣೆ ಆದ ನಂತರವೇ ದಾಳ ಉರುಳಿಸೋಣ ಅನ್ನೋ ಲೆಕ್ಕಾಚಾರ ಬಿ.ಎಸ್.ವೈ ದು ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಎಲ್ಲಾ ಸಚಿವಾಕಾಂಕ್ಷಿ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸರ್ಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲಿ ದೋಸ್ತಿಗಳು ನಿರತರಾಗಿದ್ದಾರೆ. ಇತ್ತ ಬಿಜೆಪಿ ಹೆಚ್ಚು ಕಡಿಮೆ ಆದರೆ ಅದರ ಲಾಭ ಮಾಡಿಕೊಳ್ಳುವ ಯೋಜನೆನೆಯಲ್ಲಿ ಯೋಜನೆ ನಿರತವಾಗಿದೆ. ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ಪವನ್ ಕುಮಾರ್, ಪೊಲಿಟಿಕಲ್ ಬ್ಯುರೋ, ಟಿವಿ5 ಬೆಂಗಳೂರು

Next Story

RELATED STORIES