ರೋಹಿತ್, ಧವನ್ಗೆ ವಿಶ್ರಾಂತಿ: ಧೋನಿ ಮತ್ತೆ ನಾಯಕ!

ಅದ್ಭುತ ಫಾರ್ಮ್ನಲ್ಲಿರುವ ನಾಯಕ ರೋಹಿತ್ ಶರ್ಮ ಹಾಗೂ ಉಪನಾಯಕ ಶಿಖರ್ ಧವನ್ ಸೇರಿ 5 ಮಂದಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ, ಈ ಮೂಲಕ ಆಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಮತ್ತೆ ನಾಯಕ ಪಟ್ಟ ನೀಡಲಾಯಿತು.
ನಾಯಕತ್ವಕ್ಕೆ ವಿದಾಯ ಹೇಳಿ ಸುಮಾರು 2 ವರ್ಷ ಕಳೆದ ನಂತರ ಮಹೇಂದ್ರ ಸಿಂಗ್ ಧೋನಿ ಮತ್ತೆ ತಂಡವನ್ನು ಮುನ್ನಡೆಸುವ ಅವಕಾಶ ಪಡೆದರು. ಮತ್ತೊಂದು ವಿಶೇಷ ಅಂದರೆ ಧೋನಿ ಪಾಲಿಗೆ ಇದು 200ನೇ ಏಕದಿನ ಪಂದ್ಯವಾಗಿದ್ದು, ವಿಶೇಷ ಗೌರವ ನೀಡಿದಂತಾಯಿತು.
ಆಫ್ಘಾನಿಸ್ತಾನ ವಿರುದ್ಧ ಮಂಗಳವಾರ ನಡೆದ ಏಷ್ಯಾಕಪ್ನ ಸೂಪರ್-4 ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಹಾಗೂ ಉಪನಾಯಕ ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಯಜುರ್ವೆಂದ್ರ ಚಾಹಲ್ಗೆ ವಿಶ್ರಾಂತಿ ನೀಡಲಾಯಿತು.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಯುವಪಡೆಯನ್ನು ಮುನ್ನಡೆಸುವ ಹೊಣೆಯನ್ನು ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಹಿಸಲಾಯಿತು. ಈ ಮೂಲಕ ಧೋನಿ ನಾಯಕತ್ವ ತೊರೆದ 696 ದಿನಗಳ ನಂತರ ಮತ್ತೆ ನಾಯಕನಾದರು. ದೀಪಕ್ ಚಾಹರ್ ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದರು.
ಆರಂಭಿಕರಾಗಿ ಕೆ.ಎಲ್.ರಾಹುಲ್ ತಂಡಕ್ಕೆ ಮರಳಿದರೆ, ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ, ಖಲೀಲ್, ಸಿದ್ಧಾರ್ಥ್ ಕೌಲ್ ಮತ್ತು ಕೇದಾರ್ ಜಾಧವ್ ಸ್ಥಾನ ಪಡೆದರು.
ಭಾರತ ತಂಡ:
ಮಹೇಂದ್ರ ಸಿಂಗ್ ಧೋನಿ (ನಾಯಕ), ಕೆ.ಎಲ್. ರಾಹುಲ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್, ಕೇದಾರ್ ಜಾಧವ್, ಮನೀಷ್ ಪಾಂಡೆ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಸಿದ್ಧರ್ಥ್ ಕೌಲ್, ಖಲೀಲ್.