'ಕಾಂಪೀಟ್ ವಿತ್ ಚೈನಾ'ಯೋಜನೆ : ಪ್ರಸಕ್ತ ವರ್ಷ 500 ಕೋಟಿ ಅನುದಾನ

ಬೆಂಗಳೂರು : ರಾಜ್ಯ ಸರ್ಕಾರವು ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ. ಮುಂದಿನ ವರ್ಷ 2000 ಕೋಟಿ ರೂ ಗಳನ್ನು ಒದಗಿಸಲಾಗತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ‘ಕಾಂಪೀಟ್ ವಿತ್ ಚೈನಾ’ ಯೋಜನೆಯಡಿ ಸ್ಥಾಪಿಸಲಾದ ವಿವಿಧ ವಲಯಗಳ ಉದ್ಯಮಿಗಳನ್ನೊಳಗೊಂಡ 6 ವಿಷನ್ ಗ್ರೂಪ್ಗಳ ಸದಸ್ಯರೊಂದಿಗೆ ಸಂವಾದ ನಡೆಸುತ್ತಿದರು.
ಈ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಸಂಪನ್ಮೂಲಗಳ ಬಳಕೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳ ತಯಾರಿಕೆ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳು, ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆ, ಮೈಸೂರಿನಲ್ಲಿ ಪಿಸಿಬಿ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ತಯಾರಿಕೆ, ತುಮಕೂರಿನಲ್ಲಿ ಕ್ರೀಡೆ ಮತ್ತು ಫಿಟ್ನೆಸ್ ಉಪಕರಣಗಳ ತಯಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯ ಸರ್ಕಾರವು 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ 2ನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುವವರಿಗೆ ಸರ್ಕಾರ ಎಲ್ಲ ರೀತಿಯಲ್ಲೂ ನೆರವಾಗಲಿದೆ ಎಂದು ತಿಳಿಸಿದರು.
ಸಂವಾದದ ವೇಳೆ ಕೊಪ್ಪಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಟಿಕೆಗಳ ಉತ್ಪಾದನಾ ಕ್ಲಸ್ಟರ್, ಬಳ್ಳಾರಿಯ ವಸ್ತ್ರೋದ್ಯಮ ಕ್ಲಸ್ಟರ್, ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಸಿಬಿ/ ಪಿಸಿಬಿ ಕ್ಲಸ್ಟರ್, ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೊಬೈಲ್ ಫೋನ್ ಬಿಡಿಭಾಗಗಳ ಕ್ಲಸ್ಟರ್, ಕಲಬುರಗಿಯ ಸೋಲಾರ್ ಉಪಕರಣಗಳ ಉತ್ಪಾದನಾ ಕ್ಲಸ್ಟರ್ ಹಾಗೂ ಚಿತ್ರದುರ್ಗದ ಎಲ್ಇಡಿ ಲೈಟ್ ತಯಾರಿಕಾ ಕ್ಲಸ್ಟರ್ಗಳ ವಿಷನ್ ಗ್ರೂಪ್ನ ಸದಸ್ಯರು ತಮ್ಮ ತಮ್ಮ ವಲಯದ ಸವಾಲುಗಳು ಹಾಗೂ ಈ ಕೈಗಾರಿಕಾ ಕ್ಲಸ್ಟರ್ಗಳ ಸ್ಥಾಪನೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು, ಕೌಶಲ್ಯ ಅಭಿವೃದ್ಧಿ, ಸರ್ಕಾರ ಕಲ್ಪಿಸಬೇಕಾದ ಮೂಲಸೌಕರ್ಯಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಇನ್ನಷ್ಟು ಆಳವಾದ ಅಧ್ಯಯನ ಮಾಡಿ ವರದಿ ಸಲ್ಲಿಸುವುದಾಗಿ ಈ ವಿಷನ್ ಗ್ರೂಪ್ಗಳ ಸದಸ್ಯರು ತಿಳಿಸಿದರು.
ಸಂವಾದದಲ್ಲಿ ಗಮನಕ್ಕೆ ತರಲಾದ ವಿಷಯಗಳ ಕುರಿತು ಸರ್ಕಾರವು ಸಕಾರಾತ್ಮಕ ಕ್ರಮ ಕೈಗೊಳ್ಳಲಿದೆ. ಈ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಲು ಅಗತ್ಯ ಸಲಹೆಗಳೊಂದಿಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿಗಳು ಈ ವಿಷನ್ಗ್ರೂಪ್ಗಳ ಸದಸ್ಯರಿಗೆ ಮನವಿ ಮಾಡಿದರು.
ಈ ಸಂವಾದದಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
- chaina products Chief Minister H D Kumaraswamy Chief Minister Of Karnataka china products compete with china project kannada news today karnataka news karnataka news today latest karnataka news topnews tv5 kannada tv5 kannada live tv5 kannada news tv5 live ಅನುದಾನ ಬಿಡುಗಡೆ ಕಾಂಪೀಟ್ ವಿತ್ ಚೈನಾ ಯೋಜನೆ ಮುಖ್ಯಮಂತ್ರಿ ಕುಮಾರಸ್ವಾಮಿ