ಹಿಮಾಚಲದಲ್ಲಿ 35 ಐಐಟಿ ವಿದ್ಯಾರ್ಥಿ ಸೇರಿ 45 ಟ್ರಕ್ಕರ್ಗಳು ನಾಪತ್ತೆ

ಭಾರೀ ಇಬ್ಬನಿ ಬಿದ್ದ ಕಾರಣ ಟ್ರಕ್ಕಿಂಗ್ ಹೊರಟ್ಟಿದ್ದ ರೂರ್ಕೀ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ 35 ವಿದ್ಯಾರ್ಥಿಗಳು ಸೇರಿದಂತೆ 45 ಮಂದಿ ಹಿಮಾಚಲ ಪ್ರದೇಶದ ಲಹುಲ್ ಮತ್ತು ಸ್ಪಿಟಿ ಜಿಲ್ಲೆಗಳಲ್ಲಿ ನಾಪತ್ತೆಯಾಗಿದ್ದಾರೆ.
ಹಂಪ್ಟಾ ಪಾಸ್ ಬಳಿ ಟ್ರಕ್ಕಿಂಗ್ ತೆರಳಿದ್ದ 45 ಮಂದಿ ಮನಾಲಿಗೆ ಹಿಂತಿರುಗಬೇಕಿತ್ತು. ಆದರೆ ಇನ್ನೂ ಹಿಂತಿರುಗಿಲ್ಲ. ಅಲ್ಲದೇ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಟ್ರಕ್ಕಿಂಗ್ಗೆ ಹೋದ ಗುಂಪಿನ ಒಬ್ಬ ವಿದ್ಯಾರ್ಥಿಯ ತಂದೆ ರಾಜ್ವೀರ್ ಸಿಂಗ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಹಾಗೂ ಇಬ್ಬನಿ ಬೀಳುತ್ತಿದ್ದು, ಇದುವರೆಗೆ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಪ್ರತ್ಯೇಕ ಘಟನೆಗಳಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಕುಲುನಲ್ಲಿ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಂಗ್ರಾ, ಕುಲು ಮತ್ತು ಹಮೀಪುರ್ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಸ್ಥಳೀಯ ಆಡಳಿತ ಆದೇಶಿಸಿದೆ.
ಕುಲು ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ತುರ್ತು ಪರಿಹಾರಕ್ಕಾಗಿ 20 ಕೋಟಿ ರೂ. ಪರಿಹಾರ ಘೋಷಿಸಲಾಗಿದೆ. ಅಲ್ಲದೇ ಸ್ಥಳೀಯ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.