Top

ವಿಧಾನಪರಿಷತ್ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಿಜೆಪಿ

ಬೆಂಗಳೂರು : ವಿಧಾನಪರಿಷತ್ ಚುನಾವಣಾ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದ ಬಿಜೆಪಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದೆ.

ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ದೋಸ್ತಿ ಸರ್ಕಾರಕ್ಕೆ ಟಾಂಗ್ ಕೊಡಲು ಹೊರಟಿದ್ದ ಬಿ.ಎಸ್.ವೈ ಏಕಾಏಕಿ ಸೈಲೆಂಟ್ ಆಗಿದ್ಯಾಕೆ.? ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಕೊಟ್ಟ ಸೂಚನೆ ಏನು.? ಈ ಎಲ್ಲದರ ಕುರಿತು ಮುಂದೆ ಓದಿ.

ರಾಜಕೀಯ ಪ್ರತಿಷ್ಠೆಯ ಕಾರಣದಿಂದ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಉಪ ಚುನಾವಣೆ ಅಖಾಡದಿಂದ ಬಿಜೆಪಿ ಹಿಂದೆ ಸರಿದಿದೆ.

ಸಂಖ್ಯಾ ಬಲದ ಕೊರತೆ ಇದ್ದರೂ ದೋಸ್ತಿ ಸರ್ಕಾರದ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸೋದು ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಪ್ಲ್ಯಾನ್ ಆಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಯಡಿಯೂರಪ್ಪ ಪ್ಲ್ಯಾನ್ ಉಲ್ಟಾ ಆಗಿದೆ.

ಒಬ್ಬ ಅಭ್ಯರ್ಥಿ ಗೆಲುವಿಗೆ ಒಟ್ಟು 112 ಮತಗಳು ಬೇಕು. ಬಿಜೆಪಿ ಬಳಿ ಕೇವಲ 104 ಶಾಸಕರ ಮತಗಳಿವೆ. ಆದರೂ ಸಂಖ್ಯಾಬಲದ ಕೊರತೆ ಇದ್ದರೂ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದತೆ ನಡೆಸಿತ್ತು.

ಬಿಜೆಪಿಯಿಂದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಬಿಜೆ ಪುಟ್ಟಸ್ವಾಮಿ, ಮಾಲೀಕಯ್ಯ ಗೊತ್ತೇದಾರ್ ಅಭ್ಯರ್ಥಿಗಳಾಗಿ ನಾಮ ಪತ್ರ ಸಲ್ಲಿಸೋದು ಖಚಿತ ಎನ್ನಲಾಗಿತ್ತು.

ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿಯ ಒಬ್ಬ ಅಭ್ಯರ್ಥಿಯನ್ನಾದರೂ ಗೆಲ್ಲಿಸುತ್ತಾರೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಮುಜುಗರ ತರಿಸಬಹುದೆಂಬ ಲೆಕ್ಕಾಚಾರ ಬಿ.ಎಸ್.ವೈ ದಾಗಿತ್ತು.

ಆದರೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಸಕರಿಂದ ಸೂಕ್ತ ಸಹಕಾರ ಸಿಗಲಿಲ್ಲ ಎನ್ನಲಾಗಿದೆ. ಸಿ.ಪಿ.ಯೋಗೇಶ್ವರ್, ಗುತ್ತೇದಾರ್ ರಿಂದಲೂ ದೋಸ್ತಿ ಸರ್ಕಾರದ ಅತೃಪ್ತ ಶಾಸಕರಿಂದ ಅಡ್ಡ ಮತದಾನ ಮಾಡಿಸುವ ವಿಶ್ವಾಸ ಬಿ.ಎಸ್.ವೈ ಗೆ ಸಿಗಲಿಲ್ಲ ಎನ್ನಲಾಗಿದೆ.

ಸಿ.ಪಿ ಯೋಗೇಶ್ವರ್, ಮಾಲೀಕಯ್ಯ ಗುತ್ತೇದಾರ್, ಬಿ.ಜೆ ಪುಟ್ಟಸ್ವಾಮಿ ಹಾಗೂ ತಮ್ಮ ಆಪ್ತರ ಜೊತೆ ಬಿ.ಎಸ್.ವೈ ಈ ಕುರಿತು ಸಭೆ ನಡೆಸಿದರು.

ನಮಗೆ ಸಂಖ್ಯಾಬಲದ ಕೊರತೆ ಇದೆ. ದೋಸ್ತಿ ಪಕ್ಷಗಳ ಅತೃಪ್ತ ಶಾಸಕರು ಅಡ್ಡಮತದಾನನ ಮಾಡುತ್ತಾರೆಂಬ ವಿಶ್ವಾಸ ನಮಗಿಲ್ಲ. ಒಂದು ವೇಳೆ ಅಡ್ಡ ಮತದಾನ ಮಾಡಿದರೂ ನಮಗೆ ಕೆಟ್ಟ ಹೆಸರು ಬರುತ್ತೆ. ಹೀಗಾಗಿ ಯಾರೂ ನಾಮಪತ್ರ ಸಲ್ಲಿಸೋದು ಬೇಡ ಎಂದು ಬಿ.ಎಸ್.ವೈ ಸೂಚಿಸಿದರು ಎನ್ನಲಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತ ಶಾಸಕರಿಂದ ಅಡ್ಡ ಮತದಾನ ಮಾಡಿಸಿದರೆ ಬಿಜೆಪಿಗೆ ಕಳಂಕ ಬರುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ಆಪರೇಶನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈಗ ಅಡ್ಡಮತದಾನ ಮಾಡಿಸಿದರೆ ಸರ್ಕಾರ ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡ್ತಿದೆ ಎಂಬುದು ಬಹಿರಂಗವಾಗೇ ಸಾಬೀತಾಗುತ್ತದೆ. ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆ ತಂತ್ರಕ್ಕೂ ಇದರಿಂದ ಹಿನ್ನಡೆ ಆಗುತ್ತೆ.

ಹೀಗಾಗಿ ಬೇಡ ಎಂದು ಬಿ.ಎಸ್.ವೈ ಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು ಎನ್ನಲಾಗಿದೆ. ಇದರಿಂದಾಗಿ ಇಂದು ಬಿಜೆಪಿಯಿಂದ ಯಾರೂ ನಾಮಪತ್ರ ಸಲ್ಲಿಸಲಿಲ್ಲ ಎಂದೇ ಹೇಳಲಾಗ್ತಿದೆ.

ಸದ್ಯ ಬಿಜೆಪಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ಯುದ್ಧಕ್ಕೂ ಮೊದಲೇ ಸೋಲು ಒಪ್ಪಿಕೊಂಡಂತಾಗಿದೆ. ಕಣದಿಂದ ಹಿಂದೆ ಸರಿದರೂ ಪಕ್ಷದ ವರ್ಚಸ್ಸಿಗೆ ದಕ್ಕೆಯಾಗದಂತೆ ಬಿ.ಎಸ್.ವೈ ಎಚ್ಚರಿಕೆ ವಹಿಸುವಲ್ಲಿ ಯಶ ಕಂಡಿದ್ದಾರೆ.

ವರದಿ : ಪವನ್ ಕುಮಾರ್, ಪೊಲಿಟಿಕಲ್ ಬ್ಯುರೋ, ಟಿವಿ5 ಬೆಂಗಳೂರು

Next Story

RELATED STORIES