Top

ಕಡಿಮೆ ಮಳೆಯಲ್ಲೂ ಬಂಪರ್‌ ಈರುಳ್ಳಿ ಬೆಳೆ : ಬೆಲೆ ಇಲ್ಲದೇ ಸಂಕಷ್ಟದಲ್ಲಿ ರೈತರು.!

ಕಡಿಮೆ ಮಳೆಯಲ್ಲೂ ಬಂಪರ್‌ ಈರುಳ್ಳಿ ಬೆಳೆ : ಬೆಲೆ ಇಲ್ಲದೇ ಸಂಕಷ್ಟದಲ್ಲಿ ರೈತರು.!
X

ಚಿತ್ರದುರ್ಗ : ಈರುಳ್ಳಿ ಅಂದಾಕ್ಷಣ ಕಣ್ಣೀರು ನೆನಪಾಗುತ್ತೆ. ಅದು ಯಾರ ಕಣ್ಣು ಬೇಕಾದರೂ ಆಗಬಹುದು. ಕಣ್ಣೀರು ತರಿಸುವುದಷ್ಟೇ ಈರುಳ್ಳಿಯ ಕೆಲಸ. ಅದು ಅದರ ಸ್ವಭಾವ ಕೂಡಾ. ನಿತ್ಯ ಅಡುಗೆ ಮನೆಯಲ್ಲಿ ಕಣ್ಣೀರು ತರಿಸುವುದು ಸಾಮಾನ್ಯ.

ಆದ್ರೆ, ಇದಕ್ಕಿಂತ ಭಿನ್ನ ಅಂದರೆ ಒಂದೋ ಬೆಳೆಯುವವರ ಕಣ್ಣಲ್ಲಿ ಇಲ್ಲವೇ ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಕೆಲಸವನ್ನೂ ಈರುಳ್ಳಿ ಮಾಡುತ್ತಿದೆ. ಈ ಕಣ್ಣೀರು ತರಿಸುತ್ತಿರುವ ಈರುಳ್ಳಿ ಸುದ್ದಿ ಮುಂದೆ ಓದಿ..

ಕೋಟೆನಾಡು ಚಿತ್ರದುರ್ಗ ಜಿಲ್ಲೆ ಈರುಳ್ಳಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಒಂದು. ತೋಟಗಾರಿಕೆ ಇಲಾಖೆ ಅಂಕಿ ಅಂಶಗಳ ಪ್ರಕಾರ ಇಲ್ಲಿ ಸರಾಸರಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆಯುತ್ತಾರೆ.

ಮುಂಗಾರಿನ ಆರಂಭದಲ್ಲಿ ಇಲ್ಲಿ ಬೀಳುವ ಮಳೆಗೆ ಈರುಳ್ಳಿ ಬಿತ್ತನೆ ಮಾಡುತ್ತಾರೆ. ಸಕಾಲಕ್ಕೆ ಮಳೆ ಬಾರದಿದ್ದರೆ ಬೆಳೆಯ ಕಥೆ ಅಲ್ಲಿಗೆ ಮುಗಿಯುತ್ತೆ. ಇತ್ತ ಸಾಲ, ಸೂಲ ಮಾಡಿ ಬಿತ್ತನೆ ಮಾಡಿದ್ದ ರೈತ ಕಂಗಾಲಾಗುತ್ತಾನೆ. ಇದು ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಒಂದು ಸಾಮಾನ್ಯ ಚಿತ್ರಣವಾಗಿಬಿಟ್ಟಿದೆ.

ಇನ್ನೂ ಮಳೆ ಬಂದು ಬೆಳೆ ಬಂತು ಅಂದರೆ ಬೆಲೆಯ ಸಮಸ್ಯೆ ಶುರುವಾಗುತ್ತೆ. ಹತ್ತೋ, ಹದಿನೈದು ವರ್ಷಕ್ಕೊಮ್ಮೆ ಈರುಳ್ಳಿಗೆ ಬಂಪರ್ ಬೆಲೆ ಬಂದು ಬಿಡುತ್ತೆ. ಅದರ ಸದ್ದು ಎಷ್ಟರಮಟ್ಟಿಗೆ ಆಗುತ್ತೆ ಅಂದ್ರೆ, ವೈದ್ಯ, ಇಂಜಿನಿಯರ್ ಕೂಡಾ ಕೆಲಸ ಬಿಟ್ಟು ಬಂದು ಈರುಳ್ಳಿ ಬೆಳೆಯಬೇಕು ಅನ್ನುವಷ್ಟರ ಮಟ್ಟಿಗೆ ಈ ಬೆಲೆ ಕಣ್ಣು ಕುಕ್ಕಿಸುತ್ತದೆ.

ಆದ್ರೆ, ಉಳಿದ ದಿನಗಳಲ್ಲಿ ರೈತರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಈ ವರ್ಷ ಕೂಡಾ ಅದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ. ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ವರ್ಷ ಜಿಲ್ಲೆಯಲ್ಲಿ ಆರಂಭದಲ್ಲಿ ಒಂದಿಷ್ಟು ಒಳ್ಳೆಯ ಮಳೆ ಬಂದಿತ್ತು ಅದನ್ನು ನಂಬಿದ ರೈತರು ಈರುಳ್ಳಿ ಮತ್ತಿತರೆ ಬೆಳೆಗಳನ್ನು ಬಿತ್ತಿದ್ದರು. ಆದ್ರೆ, ನಂತರ ಮಳೆ ಕೈಕೊಟ್ಟಿದ್ದರಿಂದ ರೈತ ಬರಕ್ಕೆ ತುತ್ತಾಗಿದ್ದಾನೆ.

ಈ ನಡುವೆ ಇದ್ದ ಅಷ್ಟೋ, ಇಷ್ಟೋ ನೀರನ್ನು ಹರಿಸಿ ಈರುಳ್ಳಿ ಬೆಳೆದ ರೈತರಿಗೆ ಬೆಲೆ ಕಣ್ಣೀರು ತರಿಸಿದೆ. ಹಾಕಿದ ಅಸಲು ಕಳೆದ ಲಾಭ ಸಿಗಬೇಕಾದ್ರೆ ಪ್ರತಿ ಮೂಟೆಗೆ ಕನಿಷ್ಟ 800 ರೂಪಾಯಿ ಬೆಲೆ ಸಿಗಬೇಕು.

ಆದ್ರೆ, ಈಗ 450 ರಿಂದ 600 ರೂಪಾಯಿ ಮಾರುಕಟ್ಟೆ ಇದೆ. ಇದರಿಂದ ರೈತರು ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ನಿರೀಕ್ಷೆ ಮಾಡುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ ನಾಲ್ಕು ತಾಲೂಕುಗಳು ಬರಕ್ಕೆ ತುತ್ತಾಗಿವೆ. ಈಗ ಸಾಲ ಮಾಡಿ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಈರುಳ್ಳಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ಒದಗಿಸಬೇಕು ಎನ್ನುವುದು ರೈತರ ಆಗ್ರಹ.

ವರದಿ : ವೀರೇಶ್ ವಿ ಚಳ್ಳಕೆರೆ, TV5 ಚಿತ್ರದುರ್ಗ

Next Story

RELATED STORIES