Top

ಡಾ.ರಾಜ್ ಬಗ್ಗೆ ತೆಲುಗು ಸ್ಟಾರ್ ನಿರ್ದೇಶಕ ಹೇಳಿದ್ದೇನು?

ಡಾ.ರಾಜ್ ಬಗ್ಗೆ ತೆಲುಗು ಸ್ಟಾರ್ ನಿರ್ದೇಶಕ ಹೇಳಿದ್ದೇನು?
X

ತೆಲುಗು ಚಿತ್ರರಂಗದಲ್ಲಿ ಆರ್ಯ,100% ಲವ್, ರಂಗಸ್ಥಳಂ ಹೀಗೆ ಸತತ ಹಿಟ್ ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೇಶಕ ಸುಕುಮಾರ್​ಗೆ ಕನ್ನಡದ ವರನಟ ಡಾ.ರಾಜ್ ಅಂದರೆ ಬಲು ಇಷ್ಟವಂತೆ. ಅವರ ಸರಳತೆ, ವಿನಯತೆಗೆ ಫುಲ್ ಫಿದಾ ಆಗಿದ್ದಾರೆ. ಡಾ.ರಾಜ್​​ಗೂ ತೆಲುಗು ನಿರ್ದೇಶಕ ಸುಕುಮಾರ್​​ಗೆ ಎತ್ತಿಂದ ಎತ್ತ ಸಂಬಂಧ? ಇಲ್ಲಿದೆ ಪೂರ್ಣ ವಿವರ.

ರಾಜ್ ಕುಮಾರ್ ಅಂದರೆ ಸುಕುಮಾರ್​ರವರಿಗೆ ಯಾಕೆ ಬಲು ಇಷ್ಟ ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ. 2004ರಲ್ಲಿ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಆರ್ಯ ಸಿನಿಮಾ ಬರೀ ತೆಲುಗು ಮಂದಿ ಮನಸನ್ನು ಮಾತ್ರ ಗೆದ್ದಿರಲಿಲ್ಲ. ಇಡೀ ಭಾರತೀಯ ಚಿತ್ರರಸಿಕರ ಮನಸನ್ನು ಕದ್ದಿತ್ತು.

ಎಲ್ಲಾ ಹೊಸ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿತ್ತಿದ್ದ ಡಾ.ರಾಜ್, ಆರ್ಯ ಸಿನಿಮಾವನ್ನು ನೋಡಿ ಮೆಚ್ಚಿದ್ದರು. ಸುಕುಮಾರ್​ರನ್ನ ಮನೆಗೆ ಕರೆಸಿ, ಉಪಚಾರ ಕೂಡ ಮಾಡಿ ಕಳಿಸಿದ್ದರು.

ಕನ್ನಡ ಸಿನಿಮಾವೊಂದರ ಮುಹೂರ್ತ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸುಕುಮಾರ್, ಮಾಧ್ಯಮಗಳ ಮುಂದೆ ಅಣ್ಣಾವ್ರನ್ನ ನೆನೆದಿದ್ದು ಹೀಗೆ.

‘ಆಗ ಆರ್ಯ ಸಿನಿಮಾ ಬಂದಿತ್ತು. ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಆರ್ಯ ಸಿನಿಮಾವನ್ನು ನೋಡಿ ಡಾ.ರಾಜ್ ತಮ್ಮ ಮನೆಗೆ ಕರೆಸಿಕೊಂಡು ನಮ್ಮನ್ನ ಪ್ರೋತ್ಸಾಹಿಸಿದ್ರು. ಊಟ ಉಪಚಾರ ಮಾಡಿ ಮನೆಮುಂದಿನ ಗೇಟಿನವರೆಗೂ ಬಂದು ತಾವೇ ಕಾರಿನ ಬಾಗಿಲು ತೆಗೆದು ಕೂರಿಸಿದರು. ನಾನು ಆ ಸಂದರ್ಭವನ್ನು ಎಂದಿಗೂ ಮರೆಯೋದಿಲ್ಲ'

ಸುಕುಮಾರ್​ ಶಿಷ್ಯ ರಮೇಶ್ ವೆಂಕಟೇಶ್ ಬಾಬು ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾದ ಹೆಸರು ಲಕ್ಷ್ಮೀತನಯ. ಅದರ ಸಿನಿಮಾ ಮುಹೂರ್ತಕ್ಕೆ ಬಂದು ಶಿಷ್ಯನ ನೂತನ ಸಿನಿಮಾಗೆ ಬೆನ್ನು ತಟ್ಟಿದ್ದಾರೆ ಸುಕುಮಾರ್.

ನಟ ಸಾರ್ವಭೌಮನನ್ನ ನೆನೆದಿದ್ದಷ್ಟೇ ಅಲ್ಲ, ಅವರ ಸಮಾಧಿಗೆ ಭೇಟಿ ನೀಡಿ ಕೈಮುಗಿದು ಬಂದಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಸೂರಜ್ ಗೌಡ ನಟನೆಯ ಲಕ್ಷ್ಮೀತನಯ ಸಿನಿಮಾದ ಮುಹೂರ್ತ ನೆರೆವೇರಿತ್ತು. ಆಗ ಸ್ಟುಡಿಯೋ ಪಕ್ಕದಲ್ಲೇ ರಾಜ್​ಕುಮಾರ್ ಸ್ಮಾರಕ ಇರೋದು ಎಂದು ಗೊತ್ತಾದ ಕೂಡಲೆ ಸ್ಮಾರಕಕ್ಕೆ ಭೇಟಿ ನೀಡಿ ಅಣ್ಣವ್ರರಿಗೆ ಗೌರವ ಸಮರ್ಪಿಸಿದರು.

ಸುಕುಮಾರ್​ರವರಿಗೆ ಕನ್ನಡದ ಮೇಲೆ ಎಲ್ಲಿಲ್ಲದ ಅಭಿಮಾನ. ಜೀವನದಲ್ಲಿ ಒಂದು ಕನ್ನಡ ಸಿನಿಮಾವನ್ನಾದರೂ ನಿರ್ದೇಶನ ಮಾಡಿಯೇ ಮಾಡ್ತೀನಿ ಅಂತಾರೆ. ತಮ್ಮ ಶಿಷ್ಯನ ಕೆಲಸಕ್ಕೆ ಬೆನ್ನತಟ್ಟುವ ನೆಪದಲ್ಲಿ ಬೆಂಗಳೂರಿಗೆ ಬಂದು, ಅಣ್ಣಾವ್ರನ್ನು ನೆನೆದು ಕನ್ನಡಿಗರ ಮನಸು ಗೆದ್ದಿದ್ದಾರೆ ನಿರ್ದೇಶಕ ಸುಕುಮಾರ್​​.

ಶ್ರೀಧರ್ ಶಿವಮೊಗ್ಗ, ಎಂಟರ್​ಟೈನ್ಮೆಂಟ್ ಬ್ಯೂರೋ_TV5

Next Story

RELATED STORIES