Top

ಹವಾಲ ದಂಧೆಯಲ್ಲಿ ಭಾಗಿಯಾಗಿಲ್ಲ, ಹೆದರಿ ಓಡಿ ಹೋಗಲ್ಲ : ಸಚಿವ ಡಿಕೆಶಿ

ಹವಾಲ ದಂಧೆಯಲ್ಲಿ ಭಾಗಿಯಾಗಿಲ್ಲ, ಹೆದರಿ ಓಡಿ ಹೋಗಲ್ಲ : ಸಚಿವ ಡಿಕೆಶಿ
X

ಬೆಂಗಳೂರು : ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ಸಂಬಂಧ ಕೇಂದ್ರ ಬಿಜೆಪಿ ಮುಖಂಡ ಸಂಬೀತ್‌ ಪಾತ್ರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೆ ಬೆಂಗಳೂರಲ್ಲಿ ಪ್ರೆಸ್‌ಮಿಟ್‌ ಕರೆದ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರದ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ. ಐಟಿ, ಇಡಿ ಕೇಸ್ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಸಮಸ್ಯೆ ಎದುರಾದರೂ ಕಾನೂನು ಮೂಲಕವೇ ಹೋರಾಟ ಮಾಡುತ್ತೇವೆ ಎಂದಿರುವ ಅವರು, ಯಡಿಯೂರಪ್ಪ ಚೆಕ್ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ, ಅದರ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಹೇಳ್ತಾರೆ ಮೂರು ದಿನದಲ್ಲಿ ಜೈಲಿಗೆ ಹೋಗ್ತಾರೆ ಅಂತ. ಜೈಲಿಗೆ ಅಲ್ಲ, ಬೇಕಾದರೆ ಗಲ್ಲಿಗೆ ಹಾಕಲಿ, ನಾವು ಹೆದರೋ ಮನುಷ್ಯರೇ ಅಲ್ಲ ಅಂತ ಖಡಕ್‌ ಆಗೇ ಹೇಳಿದರು.

ಒಟ್ಟು 82 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಡೈರಿಯಲ್ಲಿ ಪತ್ತೆಯಾದ ಎಸ್‌ಜಿ, ಆರ್‌ಜಿ ಇವೆಲ್ಲಾ ಯಾವ ಕೋಡ್‌ವರ್ಡ್? ನಮ್ಮ ನಾಯಕರ ಚಾರಿತ್ರ್ಯ ವಧೆಗೆ ಕ್ರಿಯೇಟ್ ಮಾಡಲಾಗಿದೆ. ಯಾವ ಆಧಾರ ಇಟ್ಟುಕೊಂಡು ಆರೋಪ ಮಾಡಿದ್ದೀರಾ? ಎಂದು ಸಂಬೀತ್‌ ಪಾತ್ರಗೆ ಸಚಿವ ಡಿ ಕೆ ಶಿವಕುಮಾರ್ ಎದಿರೇಟು ಕೊಟ್ಟರು.

ಯಾವುದಕ್ಕೂ ಹೆದರಲ್ಲ ಎಂದಿರುವ ಅವರು, ಜಾರಿ ನಿರ್ದೇಶನಾಲಯದಿಂದ ಯಾವುದೇ ನೋಟಿಸ್ ಬರಲಿ, ಹೆದರದೆ ವಿಚಾರಣೆಗೆ ಹಾಜರಾಗುತ್ತೇನೆ. ಎಲ್ಲಾ ದಾಖಲೆ ಒದಗಿಸಿಕೊಡುತ್ತೇವೆ. ಹೆದರಿ ಓಡಿ ಹೋಗಲು ನಾನೇನು ಮರ್ಡರ್ ಮಾಡಿದ್ದೇನೆಯೇ? ಯಾವ ಹವಾಲ ಹಣ ಟ್ರಾನ್ಸಾಕ್ಷನ್ ಆಗಿದೆಯಾ ಎಂದು ಕಿಡಿಕಾರಿದರು.

ನಾನೊಬ್ಬ ಬ್ಯುಸಿನೆಸ್‌ಮನ್, ವ್ಯವಹಾರ ಇರುತ್ತೆ. ಬಂಧಿಸುವಂತಹ ತಪ್ಪು ನಾನೇನು ಮಾಡಿದ್ದೇನೆ? ಎಲ್ಲ ವ್ಯವಹಾರಕ್ಕೂ ಲೆಕ್ಕವಿದೆ. ಸಾಕ್ಷಿ ಹೇಳಿದವರಿಗೆ ಹೆದರಿಸಿ, ಬೆದರಿಸಿ ಸಹಿ ಹಾಕಿಸಿಕೊಂಡಿದ್ದಾರೆ. ಬಿಜೆಪಿಯವರ ಒತ್ತಡದಿಂದ ಐಟಿಯವರು ಬಲವಂತವಾಗಿ ಸಹಿ ಹಾಕಿಸಿಕೊಳ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ಲೇವಡಿ ಮಾಡಿದ ಡಿಕೆಶಿ, ಜೈಲಿನಲ್ಲಿದ್ದವರನ್ನೆಲ್ಲಾ ಸಿಎಂ ಅಂತ ಅನೌನ್ಸ್ ಮಾಡ್ತಾರೆ. ಅಲ್ಲದೆ ನ್ಯಾಷನಲ್ ಪ್ರೆಸಿಡೆಂಟ್ ಕೂಡ ಮಾಡ್ತಾರೆ ಎಂದು ಯಡಿಯೂರಪ್ಪ, ಅಮಿತ್ ಶಾ ವಿರುದ್ಧ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.

ಅನಂತ್ ರಾಜು, ನ್ಯೂಸ್ ಡೆಸ್ಕ್‌, ಟಿವಿ5

Next Story

RELATED STORIES