Top

ತುಘಲಕ್ ದರ್ಬಾರು ಎಷ್ಟು ದಿನ ನಡೆಯುತ್ತೋ ಗೊತ್ತಿಲ್ಲ: ಯಡಿಯೂರಪ್ಪ

ತುಘಲಕ್ ದರ್ಬಾರು ಎಷ್ಟು ದಿನ ನಡೆಯುತ್ತೋ ಗೊತ್ತಿಲ್ಲ: ಯಡಿಯೂರಪ್ಪ
X

ರಾಜ್ಯದಲ್ಲಿ ತುಘಲಕ್ ಸರಕಾರ ದುಬಾರ್ ಎಷ್ಟು ದಿನ ನಡೆಯುತ್ತೋ ಗೊತ್ತಿಲ್ಲ. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ವಿಶೇಷ ಸಭೆ ಕರೆದು ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮಧ್ಯ ಬಿರುಕು ಉಂಟಾಗಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಬ್ಧವಾಗಿದೆ.

ನಮ್ಮ ಕ್ಷೇತ್ರಗಳಲ್ಲಿ ಕಳೆದ 4 ತಿಂಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಎಲ್ಲ ಕೆಲಸ ಕಾರ್ಯ ಸ್ಥಗಿತ ಆಗಿವೆ. ಕಮಿಷನ್ ಏಜೆಂಟ್ ರಿಂದ ಸರ್ಕಾರ ನಡೆಯುತ್ತಿದೆ. ಇವುಗಳನ್ನೆಲ್ಲಾ ಖಂಡಿಸಿ 15 ದಿನದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ಆರಂಭಿಸುವುದಾಗಿ ತಿಳಿಸಿದರು.

ಲೋಕೋಪಯೋಗಿ ಸಚಿವರೂ ಕಮಿಷನ್ ಏಜೆಂಟ್ ಆಗಿದ್ದಾರೆ. ಈ ಆರೋಪಗಳಿಗೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಮೌನವಾಗಿದ್ದಾರೆ. ದೇವೆಗೌಡರ ಮಕ್ಕಳು ಅನೇಕ ಹಗರಣಗಳಲ್ಲಿ ಭಾಗಿ ಆಗಿರೋದು ಗೊತ್ತೇ ಇದೆ. ಹಾಸನದಲ್ಲಿ ಸುಮಾರು 3500 ಸಾವಿರ ಕೋಟಿ ರೂ ಮೌಲ್ಯದ ಜಮೀನು ಕಬಳಿಕೆ ಮಾಡಿದ್ದಾರೆ. ಸ್ವತಃ ಮಾಜಿ ಸಚಿವ ಎ ಮಂಜು ಆರೋಪ ಮಾಡಿದ್ದಾರೆ ಎಂದು ಯಡಿಯೂರಪ್ಪ ವಿವರಿಸಿದರು.

ಸರಕಾರವನ್ನು ಕೆಡವುವ ಪ್ರಯತ್ನ ಬಿಜೆಪಿ ಮಾಡುತ್ತಿಲ್ಲ. ಆದರೆ ಕಲಬುರಗಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ಕುಮಾರಸ್ವಾಮಿ ಆಹ್ವಾನಿಸಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿ ಆಗಿ ಕುಮಾರಸ್ವಾಮಿ ಎಷ್ಟು ಕೆಳಮಟ್ಟಕ್ಕಳಿದಿದ್ದಾರೆ ಅನ್ನೋದು ಇದರಿಂದಲೇ ಗೊತ್ತಾಗುತ್ತೆ ಎಂದು ಯಡಿಯೂರಪ್ಪ ಕಿಡಿ ಕಾರಿದರು.

82 ತಾಲೂಕುಗಳಲ್ಲಿ ಬರಗಾಲ ಇದೆ, 13 ಜಿಲ್ಲೆಗಳಲ್ಲಿ ಬರಗಾಲ ಘೋಷಣೆ ಆಗಿದೆ. ಕೊಡಗಿನಲ್ಲಿ ಮಳೆಯಿಂದ ಅನಾಹುತ ಆಗಿದೆ. ಅಲ್ಲಿ ಸರಿಯಾಗಿ ಜನರಿಗೆ ಊಟ ವಸತಿ ನೋಡುತ್ತಿಲ್ಲ. ಹೀಗಾಗಿ ಕೇಂದ್ರದ ಸಹಾಯಕ್ಕೆ ಮನವಿ ಮಾಡಿದ್ದೇನೆ. ರಾಜನಾಥ್ ಸಿಂಗ್ ಬಳಿ ನೆನ್ನೆ ಚರ್ಚೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಈ ಸರ್ಕಾರ ಬಹಳ ದಿನ ಉಳಿಯುತ್ತೆ ಅನ್ನೋ ನಂಬಿಕೆ ಯಾರಿಗೂ ಇಲ್ಲ. ಸ್ವತಃ ಕಾಂಗ್ರೆಸ್ ಶಾಸಕರೇ ಈ ಸರ್ಕಾರದಲ್ಲಿ ನಮಗೆ ಉಸಿರು ಗಟ್ಟುವ ವಾತಾವರಣ ಇದೆ ಅಂತ ಹೇಳಿಕೆ ಕೊಡ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಸರ್ಕಾರ ತುಂಬಾ ದಿನ ಉಳಿಯೋದು ಅನುಮಾನ. ಆದರೆ ಅದು ನಮ್ಮಿಂದ ಅಲ್ಲ. ಸರ್ಕಾರ ಬಿದ್ದರೆ ಮುಂದಿನ ದಿನಗಳಲ್ಲಿ ಏನ್ ಮಾಡಬೇಕು ಅನ್ನೋದನ್ನ ನಾವೆಲ್ಲಾ ಪ್ರಮುಖರು ಕುಳಿತುಕೊಂಡು ಚರ್ಚೆ ಮಾಡ್ತೀವಿ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಏನಾದ್ರೂ ಮಾಡಿಕೊಳ್ಳಲಿ. ನಾವು ಲೋಕಸಭೆಯಲ್ಲಿ 24 ಸ್ಥಾನವನ್ನು ಗೆಲ್ಲಬೇಕು. ನಮ್ಮ ಸಂಘಟನೆ ಬಲಗೊಳ್ಳಬೇಕು.. ಲೋಕಸಭೆಗೆ ತಯಾರಿ ನಡೆಸಬೇಕು. 15 ದಿನಗಳ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Next Story

RELATED STORIES