Top

ಅಕ್ರಮ ಕಲ್ಲುಗಣಿಗಾರಿಕೆಯಿಂದ KRSಗೆ ಕುತ್ತು : ಡಿವೈಎಸ್ಪಿ ವರದಿಯಿಂದ ಬಹಿರಂಗ

ಅಕ್ರಮ ಕಲ್ಲುಗಣಿಗಾರಿಕೆಯಿಂದ KRSಗೆ ಕುತ್ತು : ಡಿವೈಎಸ್ಪಿ ವರದಿಯಿಂದ ಬಹಿರಂಗ
X

ಮಂಡ್ಯ : ಮನುಷ್ಯನ ದುರಾಸೆಯಿಂದ ಅರಣ್ಯ ನಾಶ ಮಾಡಿದ ಪರಿಣಾಮ ಮಡಿಕೇರಿಯಲ್ಲಿ ಹೇಗೆ ಪ್ರಕೃತಿ ಪಾಠ ಕಲಿಸಿತೊ, ಅದೇ ರೀತಿಯ ಪಾಠ ಮುಂದೆ ಮಂಡ್ಯ ಜನರಿಗೂ ಆಗಲಿದೆ. ಕೆಆರ್​ಎಸ್ ಅಣೆಕಟ್ಟೆ​ ಮಂಡ್ಯ ಜಿಲ್ಲೆಯ ಜನರ ಜೀವನಾಡಿ. ಕೃಷ್ಣರಾಜಸಾಗರ ಇಲ್ಲದಿದ್ದರೆ ಜಿಲ್ಲೆ ಬೆಂಗಾಡು ಆಗುತ್ತಿತ್ತು.

ಆದರೆ ಮುಂದೆ ಆಗಲಿದೆ ಎಂಬ ಭವಿಷ್ಯವು ಕಾಣುತ್ತಿದೆ. ಏಕೆಂದರೆ ಶ್ರೀರಂಗಪಟ್ಟಣ ಡಿವೈಎಸ್​ಪಿ ನೀಡಿರುವ ವರದಿ ಜನರನ್ನು ಬೆಚ್ಚಿಬೀಳಿಸಿದೆ. ಹಾಗಾದರೆ ಅವರು ನೀಡಿರುವ ವರದಿಯಲ್ಲಿ ಏನಿದೆ.? ಏನು ಉಲ್ಲೇಖ ಮಾಡಿದ್ದಾರೆ ನೀವೇ ಅನ್ನೋದರ ಡಿಟೇಲ್ಸ್​ ವರದಿ ಮುಂದೆ ಓದಿ..

ಕನ್ನಂಬಾಡಿ ಅಣೆಕಟ್ಟೆಗೂ ಬೇಬಿ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಕೆಆರ್​ಎಸ್​ ನಿಂತಿರುವುದೇ ಬೇಬಿ ಬೆಟ್ಟದ ಶಿಲೆಯ ಮೇಲೆ. ಆದರೆ ಅಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಕೆಆರ್​ಎಸ್​ಗೆ ಆಪತ್ತು ತರಲಿದೆ ಎಂಬ ಪರೋಕ್ಷ ಉಲ್ಲೇಖ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.

ಬೇಬಿ ಬೆಟ್ಟದ ಅಮೃತ ಮಹಲ್ ಕಾವಲ್​ನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಆರ್.ಟಿ.ಐ. ಕಾರ್ಯಕರ್ತ ರವೀಂದ್ರ ಅವರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸುವಂತೆ ಶ್ರೀರಂಗಪಟ್ಟಣ ಡಿವೈಎಸ್ಪಿಗೆ ಎಸ್​ಪಿ ಸೂಚಿಸಿದ್ದರು.

ಈ ಸೂಚನೆಯ ಅನ್ವಯ ಆರು ಪುಟಗಳ ತನಿಖಾ ವರದಿ ನೀಡಿರುವ ಡಿವೈಎಸ್ಪಿ, ಅದರಲ್ಲಿ ಬೆಚ್ಚಿಬೀಳಿಸುವ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ. ವರದಿಯ 5ನೇ ಪುಟದ ಮೂರನೇ ಪ್ಯಾರಾದಲ್ಲಿ ಕೆಆರ್​ಎಸ್ ವಿಚಾರವಾಗಿ ಬೆಚ್ಚಿಬೀಳಿಸುವ ವಿಚಾರ ತಿಳಿಸಿದ್ದಾರೆ. ಪಾಂಡವಪುರ ತಹಶಿಲ್ದಾರ್ ಯಾಕೆ ಮೂರು ತಿಂಗಳುಗಳ ಕಾಲ ಬೇಬಿ ಬೆಟ್ಟದ ಸುತ್ತಮುತ್ತ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಿದ್ದರು ಎಂಬ ಅಂಶವನ್ನು ತಮ್ಮ ವರದಿಯಲ್ಲಿ ಡಿವೈಎಸ್​ಪಿ ಉಲ್ಲೇಖಿಸಿದ್ದಾರೆ.

ಪ್ರಮುಖವಾಗಿ ಅಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಕೆಆರ್​ಎಸ್​ನ ಸುರಕ್ಷತೆ ಅಪಾಯದಲ್ಲಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಬೇಬಿ ಬೆಟ್ಟ, ಚಿನಕುರಳಿ, ಹೊನಗನಹಳ್ಳಿ ಹಾಗೂ ಕೆಆರ್​ಎಸ್​ ಏಕ ಶಿಲೆಯ ಮೇಲೆ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಕಲ್ಲು ಗಣಿಗಾರಿಕೆ ನಿಷೇಧಿಸುವುದು ಸೂಕ್ತ ಎಂಬ ವಿಚಾರ ಪ್ರಸ್ತಾಪಿಸಿದ್ದಾರೆ.

ಹಾಗಾಗಿ ಈ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಲಾಗಿತ್ತು ಎಂಬ ಅಂಶವನ್ನು ತಿಳಿಸಿದ್ದಾರೆ. ಡಿವೈಎಸ್ಪಿ ನೀಡಿರುವ ವರದಿಯನ್ನು ಬಿಡುಗಡೆ ಮಾಡಿರುವ ಆರ್.ಟಿ.ಐ. ಕಾರ್ಯಕರ್ತ ರವೀಂದ್ರ, ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಜೊತೆಗೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಿಬಿಐಗೆ ವಹಿಸಿ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆ ಕೆಆರ್​ಎಸ್​ ಭದ್ರತೆಯ ದೃಷ್ಟಿಯಿಂದ ಈಗಲಾದರೂ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಜೊತೆಗೆ ಡಿವೈಎಸ್​ಪಿ ನೀಡಿರುವ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಅಕ್ರಮ ಗಣಿಗಾರಿಕೆ ತಡೆಗೆ ಕ್ರಮ ಕೈಗೊಳ್ಳದೇ ಹೋದಲ್ಲಿ, ಕೆಆರ್‌ಎಸ್‌ ಅಣೆಕಟ್ಟೆಗೆ ಕಂಡಕ ಎದುರಾಗಲಿದೆ.

ವರದಿ : ಎಂ.ಕೆ.ಮೋಹನ್ ರಾಜ್, ಟಿವಿ5 ಮಂಡ್ಯ

Next Story

RELATED STORIES