ತೆಲಂಗಾಣದಲ್ಲಿ ಗರ್ಭಿಣಿ ಮುಂದೆಯೇ ಕೊಚ್ಚಿ ಪತಿಯ ಕೊಲೆ

ಅಂತರ್ಜಾತಿ ವಿವಾಹ ಆಗಿದ್ದಕ್ಕಾಗಿ ಗರ್ಭಿಣಿ ಪತ್ನಿಯ ಮುಂದೆಯೇ ಪತಿಯನ್ನು ಭೀಕರವಾಗಿ ಕೊಲೆಗೈದ ಘಟನೆ ತೆಲಂಗಾಣದ ನಲಗೊಂಡದಲ್ಲಿ ಶನಿವಾರ ಜರುಗಿದೆ.
ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಗೇಟ್ ಬಳಿ ಹೋಗುತ್ತಿದ್ದ ಪ್ರಣಯ್ ಕುಮಾರ್ (23) ಎಂಬಾತನನ್ನು ಲಾಂಗ್ ಕೈಯಲ್ಲಿ ಹಿಡಿದು ಹಿಂಬಾಲಿಸಿದ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯದಿಂದ ಗರ್ಭಿಣಿ ಪತ್ನಿ ಅಮೃತಾ (21) ರಕ್ಷಣೆಗಾಗಿ ಕೂಗುತ್ತಾ ವಾಪಸ್ ಮನೆಯೊಳಗೆ ಓಡಿ ಬರುತ್ತಿರುವ ದೃಶ್ಯ ದೇಶವನ್ನೇ ಬೆಚ್ಚಿಬೀಳಿಸಿದೆ.
ಘಟನೆಯನ್ನು ಖಂಡಿಸಿ ನಲಗೊಂಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಮಾರ್ಯಾದ ಹತ್ಯೆಯ ಹಿಂದಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಲಾಗಿದೆ.
ಪತಿಯ ಕೊಲೆಯ ಹಿಂದೆ ತಂದೆ ಹಾಗೂ ಚಿಕ್ಕಪ್ಪನ ಕೈವಾಡವಿದೆ ಎಂದು ಅಮೃತಾ ಪೊಲೀಸರ ಮುಂದೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಅನ್ಯ ಕೋಮಿನವನನ್ನು ಮದುವೆಯಾಗಿದ್ದರಿಂದ ಅಬಾರ್ಷನ್ ಮಾಡಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ಆಕೆ ದೂರಿದ್ದಾಳೆ.