ಸರ್ಕಾರ ಉರುಳಿಸಲು ಅಖಾಡಕ್ಕಿಳಿದ ಎಸ್‌ ಎಂ ಕೃಷ್ಣ

ಮಂಡ್ಯ : ದೋಸ್ತಿ ಸರ್ಕಾರ ಉರುಳಿಸಲು ಬಿಜೆಪಿ ಎಲ್ಲಿಲ್ಲದ ತೆರೆ ಮರೆಯ ಕಸರತ್ತಿನಲ್ಲಿ ತೊಡಗಿದೆ. ಸೆಪ್ಟಂಬರ್‌ ಸರ್ಕಾರದ ಸಂಕಟ ದೂರಾಯ್ತು ಅನ್ನೋ ಹೊತ್ತಿಗೆ ಮತ್ತೆ ಮತ್ತೆ ಸಂಕಷ್ಟ ಎದುರಾಗುತ್ತಿದೆ.

ಇದೀಗ ಬಿಜೆಪಿ ದೋಸ್ತಿ ಸರ್ಕಾರ ಉರುಳಿಸಲು ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ ಎಂ ಕೃಷ್ಣ ಅವರನ್ನು ಅಖಾಡಕ್ಕೆ ಇಳಿಸಿದೆ.

ತಮ್ಮ ಬೆಂಬಲಿತ ಶಾಸಕರನ್ನು ಬಿಜೆಪಿಗೆ ಕರೆತರಲು ಕೃಷ್ಣಗಾರುಡಿ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗಿದೆ.

ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಬಿಜೆಪಿ ಗಾಳ ಹಾಕಲು ಪ್ರಾರಂಭಿಸಿದ್ದು, ಇವರು ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಪರಮಾಪ್ತರಾಗಿದ್ದಾರೆ.

ಈ ಹಿನ್ನಲೆಯಲ್ಲಿ, ಇವರನ್ನು ಎಸ್‌ ಎಂ ಕೃಷ್ಣ ಮೂಲಕ ಬಿಜೆಪಿಗೆ ಕರೆತರಲು ತೆರೆ ಮರೆಯಲ್ಲಿ ಬಿಜೆಪಿ ಕಸರತ್ತು ನಡೆಸುತ್ತಿದೆ ಎಂಬ ಮಾತು ಕೇಳಿ ಬಂದಿದೆ.

ಅಂದಹಾಗೇ, ಎಸ್ ಎಂ ಕೃಷ್ಣ ಕಾಂಗ್ರೆಸ್ ತೊರೆದಾಗ ರವೀಂದ್ರ ಶ್ರೀಕಂಠಯ್ಯ ಕಾಂಗ್ರೆಸ್ ನಿಂದ ಹೊರಬಂದಿದ್ದರು. ಅಲ್ಲದೇ ಎಸ್ ಎಂ ಕೃಷ್ಣ ಮಾರ್ಗದರ್ಶನದಂತೆ ಜೆಡಿಎಸ್‌ ಸೇರಿ ಮೊದಲ ಬಾರಿಗೆ ಶಾಸಕರಾಗಿದ್ದರು.

ಇನ್ನೂ ಮತ್ತೊಂದೆಡೆ ಕೆ ಆರ್ ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ ಸಿ ನಾರಾಯಣ ಗೌಡರಿಗೂ ಬಿಜೆಪಿ ಗಾಳ ಹಾಕುವ ಪ್ರಕ್ರಿಯೆ ನಡೆಸಿದೆ ಎನ್ನಲಾಗಿದೆ.

ಏಕೆಂದರೇ ಅತ್ತು ಕರೆದು, ಜೆಡಿಎಸ್‌ನಿಂದ ಈ ಬಾರಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದ ಕೆ ಸಿ ನಾರಾಯಣ ಗೌಡ, ಕೆ ಆರ್ ಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಇಂತಹ ಕೆ ಸಿ ನಾರಾಯಣ ಗೌಡ, ಯಡಿಯೂರಪ್ಪ ತವರು ಕ್ಷೇತ್ರವಾದ ಕೆ ಆರ್ ಪೇಟೆ ಕ್ಷೇತ್ರದ ಶಾಸಕರಾಗಿದ್ದಾರೆ. ಇವರಿಗೂ ಬಿಜೆಪಿ ಗಾಳ ಹಾಕಲು ಕಸರತ್ತು ನಡೆಸಿದೆ ಎಂಬ ಮಾತು ಕೇಳಿಬಂದಿದೆ.

ಒಟ್ಟಾರೆಯಾಗಿ ಕಳೆದ ನಿನ್ನೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಐವರು ಬಿಜೆಪಿ ಶಾಸಕರನ್ನು ಜೆಡಿಎಸ್‌ಗೆ ಕರೆತರುವ ಮಾತು ಆಡಿದ್ದರೇ, ಇತ್ತ ಬಿಜೆಪಿ ದೋಸ್ತಿ ಸರ್ಕಾರವನ್ನು ಅಸ್ತಿರಗೊಳಿಸಲು ಜೆಡಿಎಸ್ ಭದ್ರಕೋಟೆಗೆ ಬಿಜೆಪಿ ಕೈ ಹಾಕಿದೆ.