ಲಂಡನ್‌ ಕೋರ್ಟ್‌ನಲ್ಲಿ ಮಲ್ಯ ಹೊಸಬಾಂಬ್

ಲಂಡನ್‌ : ಭಾರತೀಯ ಬ್ಯಾಂಕ್‌ಗೆ ವಂಚಿಸಿ ದೇಶದಿಂದ ಪರಾರಿಯಾಗಿರುವ ವಿಜಯ್‌ ಮಲ್ಯ ಹಸ್ತಾಂತರ ತೀರ್ಪು ಮುಂದಿನ ಡಿಸೆಂಬರ್‌ 10ಕ್ಕೆ ಹೊರಬರಲಿದೆ. ಇಂದು ಲಂಡನ್‌ ಕೋರ್ಟ್‌ ಮುಂದೆ ಹಾಜರಾಗಿದ್ದ ಮದ್ಯದ ದೊರೆ, ದೇಶ ಬಿಡುವ ಮೊದಲೇ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭೇಟಿ ಮಾಡಿದ್ದೆ ಎಂದು ಹೊಸಬಾಂಬ್‌ ಸಿಡಿಸಿದ್ದಾರೆ.

ಆದ್ರೆ, ಈ ಆರೋಪ ನಿರಾಕರಿಸಿರುವ ಜೇಟ್ಲಿ, 2014ರಿಂದಲೂ ಅವರಿಗೆ ನನ್ನ ಭೇಟಿಗೆ ಯಾವುದೇ ಸಮಯ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಮ್ಮೆ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದಾಗ ದಿಢೀರ್‌ ಎದುರಾಗಿ, ಇತ್ಯರ್ಥಗೊಳಿಸಲು ಇರಾದೆ ಇದೆ ಎಂದರು. ಆದ್ರೆ, ನಾನು ಈ ಬಗ್ಗೆ ಬ್ಯಾಂಕ್‌ ಜೊತೆ ಮಾತನಾಡಿ, ನನ್ನದೊಂದಿಗೆ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ದೇಶ ತೊರೆದಿರುವ ಮದ್ಯದ ದೊರೆ ವಿಜಯ್‌ ಮಲ್ಯ ಇಂದು ಲಂಡನ್‌ನ ವೆಸ್ಟ್‌ಮಿನಿಷ್ಟರ್‌ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಿದ್ದರು. ಭಾರತಕ್ಕೆ ಹಸ್ತಾಂತರ ಸಂಬಂಧ ನಡೆಯುತ್ತಿರುವ ವಿಚಾರಣೆಯಲ್ಲಿ ಮಲ್ಯ ಅಚ್ಚರಿ ಮಾಹಿತಿ ಹೊರಹಾಕಿದ್ದಾರೆ. ಈ ಮಾಹಿತಿ ಇದೀಗ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೊರಳಿಗೆ ಸುತ್ತಿಕೊಂಡಿದೆ.

ನ್ಯಾಯಾಧೀಶರ ಮುಂದೆ ಹಾಜರಾಗಿ ಮಾಹಿತಿ ನೀಡಿದ ಮಲ್ಯ, ನಾನು ದೇಶ ತೊರೆಯುವ ಮೊದಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ಭೇಟಿ ಮಾಡಿ, ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದೆ ಎಂದಿದ್ದಾರೆ. ಹಲವು ಬಾರಿ ನಾನು ಮನವಿ ಮಾಡಿದ್ದರೂ ಅರುಣ್‌ ಜೇಟ್ಲಿ ನಿರ್ಲಕ್ಷಿಸಿದರು ಎಂದು ಹೊಸಬಾಂಬ್‌ ಸಿಡಿಸಿದ್ದಾರೆ. ಅಲ್ಲದೆ, ಸೆಟ್ಲ್‌ಮೆಂಟ್‌ ಕೋರಿ ಬರೆದ ಪತ್ರಗಳಿಗೂ ಬ್ಯಾಂಕ್‌ಗಳು ಕಿಮ್ಮತ್ತು ನೀಡಲ್ಲ. ಸಮಸ್ಯೆ ಬಗೆಹರಿಸಿಕೊಳ್ಳದೇ, ಆಕ್ಷೇಪಿಸಿದವು ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ಅಲ್ಲದೆ, ಕಿಂಗ್‌ಫಿಶರ್‌ ಏರ್‌ಲೈನ್ಸ್‌ ನಷ್ಟ ಅನುಭವಿಸಿರುವ ಬಗ್ಗೆ ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ ಅಧಿಕಾರಿಗಳಿಗೆ ಮಾಹಿತಿ ಇದೆ. ನಾವು ಯಾವುದೇ ದುರುದ್ದೇಶ ಇಟ್ಟುಕೊಂಡು ಸಾಲ ಪಡೆದಿಲ್ಲ. ಆದ್ರೆ, ಬ್ಯಾಂಕ್‌ ಅಧಿಕಾರಿಗಳಿಂದ ಬಂದಿರುವ ಇ-ಮೇಲ್‌ ಗಮನಿಸಿದರೆ, ನಾವು ಉದ್ದೇಶಪೂರ್ವಕವಾಗಿಯೇ ನಷ್ಟ ತೋರಿಸುತ್ತಿದ್ದೇವೆ ಎಂದಿದೆ. ಆದ್ರೆ, ಇದು ನಿರಾಧಾರ ಎಂದು ನ್ಯಾಯಾಧೀಶರ ಮುಂದೆ ಮಲ್ಯ ಪರ ವಕೀಲರು ವಾದ ಮಂಡಿಸಿದ್ದಾರೆ.

ಇದೇ ವೇಳೆ ಪ್ರತಿಕ್ರಿಯಿಸಿರುವ ಮಲ್ಯ, ಕರ್ನಾಟಕ ಹೈಕೋರ್ಟ್‌ಗೆ ನಾನು ಈ ಮೊದಲೇ ಮಾಡಿದ್ದ ಪರಿಹಾರ ಪ್ರಸ್ತಾಪವು ಬಾಕಿ ಮೊತ್ತ ಪಾವತಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ನಾನು ಭರವಸೆ ಹೊಂದಿದ್ದೇನೆ. ಗೌರವಾನ್ವಿತ ನ್ಯಾಯಾಧೀಶರು ಸರಿಯಾಗಿ ತೀರ್ಮಾನಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ಎಲ್ಲರೂ ನನ್ನಿಂದ ಬರಬೇಕಾದ ಬಾಕಿ ಪಡೆಯಲಿದ್ದಾರೆ ಮತ್ತು ಅದುವೇ ನನ್ನ ಪ್ರಾಥಮಿಕ ಗುರಿಯಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಲಂಡನ್‌ ಕೋರ್ಟ್‌ನಲ್ಲಿ ಭಾರತದ ಸಿಬಿಐ ಅಧಿಕಾರಿಗಳು ಸಲ್ಲಿಸಿರುವ ಹಸ್ತಾಂತರ ಮನವಿಗೆ ಆಕ್ಷೇಪಿಸಿರುವ ವಿಜಯ್‌ ಮಲ್ಯ, ಭಾರತದ ಜೈಲಗಳಲ್ಲಿ ಉತ್ತಮ ಸ್ಥಿತಿಗಳಿಲಿಲ್ಲ ಎಂದು ದೂರಿದ್ದಾರೆ. ಇದೇ ವೇಳೆ ಸಿಬಿಐ ಸಲ್ಲಿಸಿದ್ದ ಮುಂಬೈ ಜೈಲು ಕುರಿತ ವಿಶೇಷ ವೀಡಿಯೋವನ್ನು ನ್ಯಾಯಾಧೀಶರು ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 4ರಿಂದ ಲಂಡನ್ ನ್ಯಾಯಾಲಯದಲ್ಲಿ ಮಲ್ಯ ಹಸ್ತಾಂತರ ವಿಚಾರವಾಗಿ ವಿಚಾರಣೆ ನಡೆಯುತ್ತಿದೆ.

ಅನಂತ್‌, ನ್ಯೂಸ್‌ ಡೆಸ್ಕ್‌, ಟಿವಿ5

Recommended For You

Leave a Reply

Your email address will not be published. Required fields are marked *