ನಾಳೆ ಗಣೇಶ ಚತುರ್ಥಿ : ಸೆಳೆಯುತಿವೆ ವಿವಿಧ ಬಗೆಯ ವಿನಾಯಕನ ಮೂರ್ತಿ.!

ಶಿರಸಿ : ಉಬ್ಬು ಹಣೆ, ನೀಳವಾದ ಸೊಂಡಿಲು, ದಂತಗಳು, ಡೊಳ್ಳು ಹೊಟ್ಟೆ, ಹೌದು ಗಣೇಶ ಚತುರ್ಥಿ ಹತ್ತಿರ ಬಂತೆಂದರೆ ಎಲ್ಲೆಲ್ಲೂ ಗಣಪತಿಯ ಮೂರ್ತಿಗಳೇ ರಾರಾಜಿಸುತ್ತವೆ. ವಿಶೇಷವಾಗಿ ವಿಶಿಷ್ಟವಾದ ಗಣೇಶ ಮೂರ್ತಿಗಳನ್ನು ತಯಾರಿಸುವ ಕಲೆಗಾರರ ಕಥೆಯನ್ನ ಮುಂದೆ ನೀವೆ ಓದಿ..

ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆಮಾಡಿದೆ. ಹಲವಾರು ಜನರು ಹಾಗೂ ಮಂಡಳಿಯವರು ಹಬ್ಬಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಗಣಪತಿ ಮೂರ್ತಿ ತಯಾರಕರು ಕಳೆದ 3 ತಿಂಗಳಿನಿಂದ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಅದೇ ರೀತಿ ಇಲ್ಲೊಬ್ಬರು ಪ್ರತಿವರ್ಷ ವಿಶೇಷವಾದ ಮೂರ್ತಿಗಳನ್ನ ತಯಾರಿ ಮಾಡುತ್ತಾರೆ. ಇವರು ವಿಶಿಷ್ಟವಾದ ಗಣಪನನ್ನು ತಯಾರಿಸುವಲ್ಲಿ ಎತ್ತಿದ ಕೈ. ಪ್ರತಿವರ್ಷವೂ ಬೇರೆ ಬೇರೆ ಆಕಾರದ ಗಣಪನನ್ನು ತಯಾರಿಸುವ ಇವರು ಸಿದ್ದಾಪುರ ತಾಲೂಕಿನ ಭುವನಗಿರಿಯ ಸತ್ಯನಾರಾಯಣ ಭಂಡಾರಿ.

ಇಡೀ ಸಿದ್ದಾಪುರ ತಾಲೂಕಿಗೆ ಅತಿ ಹೆಚ್ಚು ಗಣಪತಿ ಮೂರ್ತಿಗಳನ್ನು ಇವರು ತಯಾರಿಸುತ್ತಾರೆ. ಪ್ರತಿವರ್ಷ ಸುಮಾರು 75ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸುತ್ತಾರೆ. ತಾಲೂಕಿನಲ್ಲಿ ಇಡುವ ದೊಡ್ಡ ದೊಡ್ಡ ಸಾರ್ವಜನಿಕ ಗಣೇಶನ ಮೂರ್ತಿಗಳೆಲ್ಲವೂ ಇವರ ಕುಂಚದಿಂದ ಅರಳುತ್ತವೆ.

ತಾಲೂಕಿನ ಹಲವಾರು ಮನೆಗಳಲ್ಲಿ ಇಡುವ ಗಣೇಶ ಮೂರ್ತಿಗಳಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಇಲ್ಲಿಂದಲೇ ಗಣಪನ ಮೂರ್ತಿಯನ್ನು ಒಯ್ಯುತ್ತಾರೆ. ಇವರ ಒಂದು ವಿಶೇಷವೆಂದರೆ ಪ್ರತಿ ವರ್ಷ ವಿಧವಿಧದ ಗಣೇಶ ಮೂರ್ತಿಗಳನ್ನು ತಯಾರಿಸುವುದು.

ಈ ವರ್ಷದ ವಿಶೇಷವಾಗಿ ತಯಾರಿಸಿರುವ ಕೇಸರಿ, ಬಿಳಿ, ಹಸಿರು ಬಣ್ಣದಿಂದ ತಯಾರಿಸಿರುವ ರಾಷ್ಟ್ರದ್ವಜ ಗಣಪ ಗಮನ ಸೆಳೆಯುತ್ತಿದೆ. ಈ ಗಣಪನ ಮುಖ ಭಾಗ ಕೇಸರಿ ವರ್ಣದಿಂದ, ಹೊಟ್ಟೆ ಭಾಗ ಬಿಳಿ ವರ್ಣದಿಂದ ಹಾಗೂ ಕೆಳಭಾಗ ಹಸಿರು ವರ್ಣದಿಂದ ಕಂಗೊಳಿಸುತ್ತಿದ್ದು ಹೊಟ್ಟೆಯ ಮೇಲೆ ಇಳಿ ಬಿಟ್ಟಿರುವ ಡಾಲರ್ ಒಂದು ಅಶೋಕ ಚಕ್ರವನ್ನು ಪ್ರತಿನಿಧಿಸುತ್ತಿದೆ.

ಈ ಗಣಪನ ಮೂರ್ತಿಯನ್ನು ನೋಡಿದಾಗ ದೈವೀ ಭಕ್ತಿಯ ಜೊತೆ ದೇಶಭಕ್ತಿ ಅನುರಣಿಸುತ್ತದೆ. ಇದರ ಜೊತೆ ಪರಶಿವನ ಆಕಾರದ ಗಣಪ, ಸಿಂಹಾರೂಢ ಗಣಪ, ಗರುಡ ಗಣಪ, ಕಮಲದ ಮೇಲೆ ಅಸೀನವಾಗಿರುವ ಗಣಪ ಕಣ್ಮನ ಸೆಳೆಯುತ್ತಿವೆ.

ಅಂದಹಾಗೇ, ಈ ಗಣೇಶನ ಮೂರ್ತಿಗಳನ್ನು ತಯಾರಿಸಲು ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಸುಮಾರು 40 ಕಿಲೋಮೀಟರ್ ದೂರದಿಂದ ಮಣ್ಣನ್ನು ತಂದು ಹದಮಾಡಿ ಗಣೇಶ ಚೌತಿಗೂ 3 ತಿಂಗಳ ಮುನ್ನವೇ ಮೂರ್ತಿ ತಯಾರಿಕೆ ಪ್ರಾರಂಭಿಸುತ್ತಾರೆ.

ಇವರಿಗೆ ಇವರ ಪತ್ನಿ ಕೂಡ ಸಹಾಯ ಮಾಡುತ್ತಿದ್ದು, ಬಣ್ಣ ಹಚ್ಚುವ ಸಮಯದಲ್ಲಿ ಸಹಾಯಕರ ಸಹಾಯ ಕೂಡ ಪಡೆಯುತ್ತಾರೆ. ಮನೆಗಾಗಿ ಒಂದು ಮೂರ್ತಿಯನ್ನು ತಯಾರಿ ಮಾಡಲು ಪ್ರಾರಂಭವಾದ ಇವರ ಗಣೇಶ ಮೂರ್ತಿ ತಯಾರಿಕೆ, ಆನಂತ್ರ ಹವ್ಯಾಸವಾಗಿ ಕಳೆದ 18 ವರ್ಷಗಳಲ್ಲಿ 1 ಮೂರ್ತಿಯಿಂದ ಈಗ 80 ಮೂರ್ತಿ ತಯಾರಿಕೆಯವರೆಗೆ ಬಂದು ನಿಂತಿದೆ.

ಇವರ ಈ ಕಲೆಗೆ ತಕ್ಕ ಪ್ರತಿಫಲ ದೊರೆತಾಗ ಮಾತ್ರ ಅವರ ಜೀವನ ಕೂಡ ಹಸನಾಗಲು ಸಾಧ್ಯ. ಆದ್ದರಿಂದ ಎಲ್ಲರೂ ಪಿಒಪಿ ಗಣೇಶನ ಮೂರ್ತಿ ಬಿಟ್ಟು ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಖರೀದಿಸಿ ಕಲಾವಿದರ ಬದುಕಿಗೂ ಆಸರೆಯಾಗಿ, ಜೊತೆಗೆ ಪರಿಸರವನ್ನೂ ಸಹ ರಕ್ಷಿಸಿ ಅನ್ನೋದೇ ನಮ್ಮೆಲ್ಲರ ಆಶಯ.

ವರದಿ : ವಿನಾಯಕ್ ಹೆಗಡೆ ಕಲ್ಮನೆ, ಟಿವಿ5 ಶಿರಸಿ.

Recommended For You

Leave a Reply

Your email address will not be published. Required fields are marked *