ಪಾಲಿಕೆ ಸಂಭಾಳಿಸಲು ಆಗ್ತಾ ಇಲ್ಲ : ಸರ್ಕಾರಕ್ಕೆ ಬಿಬಿಎಂಪಿ ಕಮೀಷನರ್ ಪತ್ರ

ಬೆಂಗಳೂರು : ಆಡಳಿತ ನಡೆಸೋ ಖುರ್ಚಿಯಲ್ಲಿ ಕುಳಿತ್ಕೊಂಡು ಬಿಬಿಎಂಪಿ ಇತಿಹಾಸದಲ್ಲಿ ಇಂತದ್ದೊಂದು ಅಸಹಾಯಕತೆಯನ್ನು ಯಾವೊಬ್ಬ ಕಮಿಷನರ್ ವ್ಯಕ್ತಪಡಿಸಿರಲಿಲ್ಲವೆನೋ. ಅಂತದ್ದೊಂದು ವಿಚಿತ್ರ ಹಾಗೂ ವಿಪರ್ಯಾಸದ ಸನ್ನಿವೇಶಕ್ಕೆ ಕಮಿಷನರ್ ಮಂಜುನಾಥ ಪ್ರಸಾದ್ ಸಾಕ್ಷಿಯಾಗಿದ್ದಾರೆ.

ತಮ್ಮ ಆಡಳಿತ ವ್ಯಾಪ್ತಿಯಲ್ಲೆ ಪರಿಸ್ಥಿತಿ ಸುಧಾರಿಸುವುದನ್ನು ಬಿಟ್ಟು ಪಾಲಿಕೆ ಪರಿಸ್ಥಿತಿಯನ್ನು ಸಂಭಾಳಿಸ್ಲಿಕ್ಕೆ ಸಾಧ್ಯವಾಗುತ್ತಿಲ್ಲ ತಾವೇ ಖುದ್ದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪಾಲಿಕೆಯ ಆರ್ಥಿಕ ಪರಿಸ್ತಿತಿ ಸುಧಾರಿಸ್ಲಿಕ್ಕೆ ಸಾಧ್ಯವಾಗದಷ್ಟು ಹದಗೆಟ್ಟು ಹೋಗಿದೆ. ಮನಸಿಗೆ ತೋಚಿದ ರೀತಿಯಲ್ಲಿ ರೂಪಿಸಲಾಗುತ್ತಿರುವ ಬಜೆಟ್ ಅವಾಸ್ತವಿಕ ಹಾಗೂ ಅವೈಜ್ನಾನಿಕವಾಗಿದೆ. ಆಯುವ್ಯಯ ತಯಾರಿಕೆಯಲ್ಲಿ ಯಾವುದೇ ಶಿಸ್ತಿಲ್ಲ.

ಗುತ್ತಿಗೆದಾರರಿಗೆ ಪಾವತಿ ಮಾಡಬೇಕಿರುವ ಕಾಮಗಾರಿಯ ಮೊತ್ತ 15,428 ಕೋಟಿಯಷ್ಟಿದೆ. ಹಣಕಾಸು ಸಂಸ್ಥೆಗಗಳಿಗೆ ನೀಡಬೇಕಿರುವ ಸಾಲ 706 ಕೋಟಿ.2012 ರಿಂದ 2017ರವರೆಗೆ ಕಾಮಗಾರಿಗಳಿಗೆ 23,502 ಕೋಟಿ ಜಾಬ್ ಕೋಡ್ ಕೊಡಲಾಗಿದೆ.

ಇದಷ್ಟೇ ಅಲ್ಲ, ಪಾಲಿಕೆಗೆ ಬರುತ್ತಿರುವ ಆದಾಯಕ್ಕು ಆಗುತ್ತಿರುವ ವೆಚ್ಚಕ್ಕೂ ವರ್ಷದಿಂದ ವರ್ಷಕ್ಕೆ ಸಾವಿರಾರು ಕೋಟಿಯಷ್ಟು ವ್ಯತ್ಯಾಸ ಹೆಚ್ಚಾಗುತ್ತಲೇ ಇದೆ. ಇಂಥ ಪರಿಸ್ತಿತಿಯಲ್ಲಿ ಸರ್ಕಾರ ಮದ್ಯಪ್ರವೇಶಿಸದೇ ಇದ್ದಲ್ಲಿ, ಬರ್ಬಾದ್ ಆಗೋದು ಗ್ಯಾರಂಟಿ ಎನ್ನುವ ಒಕ್ಕಣೆಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸರ್ಕಾರ ಆಯುವ್ಯಯ ಸಿದ್ಧಪಡಿಸುವಾಗ ಅಳವಡಿಸಿಕೊಳ್ಳುವ ಆರ್ಥಿಕ ಶಿಸ್ತನ್ನೇ ಬಿಬಿಎಂಪಿಯಲ್ಲೂ ಅಳವಡಿಸುವಂತೆ ಸೂಚಿಸಬೇಕು. ಹಾಗೆಯೇ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮ-2003 ನ್ನು ಬಿಬಿಎಂಪಿಯಲ್ಲು ಅನುಷ್ಠಾನಕ್ಕೆ ತರಬೇಕೆಂದು ಮಂಜುನಾಥ ಪ್ರಸಾದ್ ಪತ್ರ ಬರೆದಿದ್ದಾರೆ.

ಓರ್ವ ಕಮಿಷನರ್ ಆಗಿ ಬಿಬಿಎಂಪಿ ಆರ್ಥಿಕತೆ ಸುಧಾರಣೆ ಹಾಗೂ ಆಡಳಿತ ನಿರ್ವಹಣೆಯ ಸೂಕ್ಷ್ಮ ಅರಿತುಕೊಂಡು ಕೆಲಸ ಮಾಡಬೇಕಿರುವುದು ಆಯುಕ್ತ ಮಂಜುನಾಥ ಪ್ರಸಾದ್ ಹೊಣೆಗಾರಿಕೆ. ಆದ್ರೆ ಅದನ್ನು ಮರೆತು ಮಂಜುನಾಥ ಪ್ರಸಾದ್ ಬಾಲಿಶತನದ ಪತ್ರ ಬರೆದಿರುವುದು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಅಲ್ಲದೇ ಆರ್ಥಿಕ ಶಿಸ್ತು ಇಲ್ಲದ ಸಮಯದಲ್ಲಿ ಪ್ರತಿಯೊಂದು ಪೌರಾಡಳಿತ ಸಂಸ್ಥೆಯನ್ನು ಸೂಪರ್ ಸೀಡ್ ಮಾಡುವ ಅವಕಾಶ ಸರ್ಕಾರಕ್ಕೆ ಇರುತ್ತೆ. ಮಂಜುನಾಥ್ ಪ್ರಸಾದ್ ಕೂಡ ಇಂತದ್ದೇ ಪ್ರಸ್ತಾಪವೊಂದನ್ನು ಸರ್ಕಾರದ ಮುಂದಿಟ್ಟಿದ್ದಾರಾ ಎನ್ನುವ ಶಂಕೆ ಕಾಡುತ್ತೆ.

ಅದೇನೇ ಆಗಲಿ ಕಮಿಷನರ್ ಮಂಜುನಾಥ್ ಪ್ರಸಾದ್ ಸರ್ಕಾರಕ್ಕೆ ಪತ್ರ ಬರೆದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರೋದಂತೂ ಸತ್ಯ.

ವರದಿ : ಮಂಜುನಾಥ್ ಎಸ್, ಟಿವಿ5 ಬೆಂಗಳೂರು