ಕದ್ದ ಚಿನ್ನದ ಬಾಕ್ಸ್​ನಲ್ಲೇ ಈ ಕಳ್ಳನಿಗೆ ನಿತ್ಯ ಊಟ!

ನಿಜಾಮರ ಕಾಲದ ಚಿನ್ನದ ಟಿಫನ್ ಬಾಕ್ಸ್ ಕದ್ದಿದ್ದ ಕಳ್ಳರಲ್ಲಿ ಒಬ್ಬ ಅದೇ ಬಾಕ್ಸ್​ನಲ್ಲಿಯೇ ನಿತ್ಯ ಊಟ ಮಾಡುತ್ತಿದ್ದ ಕುತೂಹಲದ ಘಟನೆಯನ್ನು ಹೈದರಾಬಾದ್ ಪೊಲೀಸರು ಬಹಿರಂಗಪಡಿಸಿದ್ದಾರೆ.

ಹೈದರಾಬಾದ್​ನ ನಿಜಾಮರ ವಸ್ತು ಸಂಗ್ರಹಾಲಯದಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಒಂದೇ ವಾರದಲ್ಲಿ ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಹಾಲಿವುಡ್​ ಸಿನಿಮಾ ಮಾದರಿಯಲ್ಲಿ ಕಳ್ಳತನ ಮಾಡಿ ಮುಂಬೈಗೆ ಹಾರಿ ಹೋಗಿದ್ದ ಕಳ್ಳರು ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಇಬ್ಬರನ್ನು ಪೊಲೀಸರು ಬಂಧಿಸಿ 4 ಕೆಜಿ ತೂಕದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಟಿಫನ್ ಬಾಕ್ಸ್ ವಶಪಡಿಸಿಕೊಂಡಿದ್ದು ಹಾಗೂ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

ನಿಜಾಮರ ಕಾಲದ ಮೂರು ಬಾಕ್ಸ್​ಗಳ ಟಿಫನ್ ಬಾಕ್ಸ್ ಕೋಟ್ಯಂತರ ರೂ. ಮೌಲ್ಯದ್ದಾಗಿದೆ. ಸ್ವತಹ ನಿಜಾಮರು ಕೂಡ ಈ ಟಿಫನ್ ಬಾಕ್ಸ್ ಅನ್ನು ಬಳಸಿರಲಿಲ್ಲ. ಆದರೆ ಬಂಧಿಸಿದ ಕಳ್ಳರಲ್ಲಿ ಒಬ್ಬ ಪ್ರತಿನಿತ್ಯ ಇದೇ ಬಾಕ್ಸ್​ನಲ್ಲಿ ಊಟ-ತಿಂಡಿ ಮಾಡುತ್ತಿದ್ದ.

ಸಿನಿಮಾ ಮಾದರಿಯಲ್ಲಿ ಸೆಪ್ಟೆಂಬರ್ 2ರಂದು ಕಳ್ಳರು ವಸ್ತು ಸಂಗ್ರಹಾಲಯಕ್ಕೆ ನುಗ್ಗಿದ್ದರು. ಪುರಾನಿ ಹವೇಲಿ (ಹಳೆಯ ಅರಮನೆ) ವೆಂಟಿಲೇಟರ್ ಮೂಲಕ ಒಳಗೆ ಪ್ರವೇಶಿಸಿದ್ದ ಕಳ್ಳರು, ಕಬ್ಬಿಣದ ಸರಳನ್ನು ಮುರಿದು ಸಣ್ಣಕಿಂಡಿಯೊಳಗೆ ನುಗ್ಗಿ ಅಮೂಲ್ಯವಾದ ವಸ್ತುಗಳನ್ನು ಕದ್ದಿದ್ದರು.

ಕಳ್ಳರು ಚಿನ್ನದ ಲೇಪನವುಳ್ಳ ಪವಿತ್ರ ಕುರಾನ್, ಚಿನ್ನದ ಟಿಫನ್ ಬಾಕ್ಸ್ ಮುಂತಾದ ವಸ್ತುಗಳನ್ನು ಕದ್ದಿದ್ದರು. ಹೈದರಾಬಾದ್​ನಲ್ಲಿ ಬೆಳಗ್ಗೆ ಅಜಾಮ್ ಗೂ ಮುನ್ನ ಈ ಕೃತ್ಯ ಎಸಗಿದ್ದರ ಹಿಂದೆ ಭಾವಾನಾತ್ಮಕ ಸಂಬಂಧ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕದ್ದ ವಸ್ತುಗಳಿಗೆ ಮಾರುಕಟ್ಟೆಯಲ್ಲಿ 1 ಕೋಟಿ ರೂ. ಮೌಲ್ಯವಿದೆ. ಆದರೆ ಪುರಾತನ ಕಾಲದ್ದಾಗಿರುವುದರಿಂದ ಇದರ ಮೌಲ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದೆಷ್ಟೋ ಪಟ್ಟು ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.