Top

ಆಪರೇಷನ್ ಕಮಲ: ರೆಡ್ಡಿ ಗಾಳದಲ್ಲಿ 18 ಕೈ ಶಾಸಕರು?

ಆಪರೇಷನ್ ಕಮಲ: ರೆಡ್ಡಿ ಗಾಳದಲ್ಲಿ 18 ಕೈ ಶಾಸಕರು?
X

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಆಗಲೋ -ಈಗಲೋ ಸರಕಾರ ಉರುಳುತ್ತೆ ಎಂಬ ವದಂತಿಗೆ ಈಗ ಮತ್ತೊಂದು ರೋಚಕ ತಿರುವು ಲಭಿಸಿದ್ದು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ 18 ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿದ್ದಾರೆ ಎನ್ನಲಾಗಿದೆ.

ಗಾಲಿ ಜನಾರ್ದನ ರೆಡ್ಡಿಯನ್ನು ಬಿಜೆಪಿ ಹೊರಗೆ ಇಟ್ಟಿದ್ದರೂ ಪರೋಕ್ಷವಾಗಿ ಅವರ ಸಹಾಯ ಪಡೆಯುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಇದೀಗ 18 ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿರುವ ಜನಾರ್ದನ ರೆಡ್ಡಿ, ಹೈದರಾಬಾದ್ ನಲ್ಲಿರುವ ತಮ್ಮದೇ ಒಡೆತನದ ರೆಸಾರ್ಟ್​ಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ.

ಬೆಳಗಾಗಿ ಬ್ಯಾಂಕ್ ಚುನಾವಣೆಯಲ್ಲಿ ಅಸಮಾಧಾನಗೊಂಡಿರುವ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸೋದರರ ಸಂಪರ್ಕದಲ್ಲಿರುವ 18 ಶಾಸಕರನ್ನು ಸೆಳೆಯಲಾಗಿದ್ದು, ಶೀಘ್ರದಲ್ಲೇ ಇಬ್ಬರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿದೆ.

ಆದರೆ ಜನಾರ್ದನ ರೆಡ್ಡಿ ಬಲೆಗೆ ಬಿದ್ದಿರುವ 18 ಶಾಸಕರು ಯಾರು ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದ ಶಾಸಕರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಜೆಡಿಎಸ್​ ನ ಶಾಸಕರು ಇದ್ದಾರೆ ಎಂಬ ಅನುಮಾನ ಇದೆ.

ಇದೇ ವೇಳೆ ಆಪರೇಷನ್ ಕಮಲ ಬಗ್ಗೆ ತಮಗೇನೂ ಗೊತ್ತಿಲ್ಲ. ನೀವೇ ಹೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಪ್ರತಿಕ್ರಿಯಿಸಿದರೆ, ನಮ್ಮ 18-20 ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬ ವದಂತಿ ಸುಳ್ಳು. ಯಾರೂ ಹೋಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.

Next Story

RELATED STORIES