Top

ಭಾರತ್‌ ಬಂದ್‌ಗೆ ಕರ್ನಾಟಕದಲ್ಲಿ ಸಖತ್ ರೆಸ್ಪಾನ್ಸ್

ಭಾರತ್‌ ಬಂದ್‌ಗೆ ಕರ್ನಾಟಕದಲ್ಲಿ ಸಖತ್ ರೆಸ್ಪಾನ್ಸ್
X

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದು, ಕರ್ನಾಟಕಕ್ಕೂ ಬಂದ್ ಬಿಸಿ ತಟ್ಟಿದೆ. ಉಡುಪಿ, ಮಂಗಳೂರು, ಮೈಸೂರು, ಮಂಡ್ಯ, ದಾವಣಗೆರೆ, ಉತ್ತರಕನ್ನಡ ಸೇರಿ ಹಲವೆಡೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಪ್ರತಿಭಟನೆ ಜೋರಾಗಿದೆ.

ಉಡುಪಿ: ಉಡುಪಿಯಲ್ಲಿ ಭಾರತ್ ಬಂದ್‌ಗೆ ಬೆಂಬಲಿಸಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಕೈ- ಕಮಲ ಕಾರ್ಯಕ್ರತರು ಹೊಡೆದಾಡಿಕೊಂಡಿದ್ದಾರೆ.ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಖಂಡಿಸಿ, ಬನ್ನಂಜೆ ಎಸ್ಪಿ ಕಚೇರಿ ಬಳಿ ಹೈಡ್ರಾಮಾ ನಡೆಸಲಾಯಿತು. ಕೊನೆಗೆ ಎಸ್ಪಿ ಲಕ್ಷ್ಮಣ್ ಬಿ. ನಿಂಬರಗಿ ಆಗಮಿಸಿ ಲಾಠಿ ಚಾರ್ಜ್ ನಡೆಸಿ, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಮೈಸೂರು: ಭಾರತ್ ಬಂದ್‌ ಹಿನ್ನೆಲೆ, ಮೈಸೂರಿನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನೆ ವೇಳೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಶಿರಸಿ: ಭಾರತ್ ಬಂದ್ ಹಿನ್ನೆಲೆ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಸ್ತೆಯಲ್ಲೇ ಅಡುಗೆ ಮಾಡಿದ ಕಾಂಗ್ರೆಸ್ಸಿಗರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಬಂದ್‌ಗೆ ಕೆಎಸ್‌ಆರ್‌ಟಿಸಿ, ಆಟೋ ಚಾಲಕರು ಬೆಂಬಲ ನೀಡಿಲ್ಲ. ಶಿರಸಿಯಲ್ಲಿ ಎಂದಿನಂತೆ ಬಸ್‌, ಆಟೋಗಳು ರಸ್ತೆಗಿಳಿದಿದ್ದು, ಅಂಗಡಿ ಮುಂಗಟ್ಟು, ಚಿತ್ರಮಂದಿರಗಳು ತೆರೆದಿದೆ.

ಹುಬ್ಬಳ್ಳಿ: ಇನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಂದ್‌ ಹಿನ್ನೆಲೆ ವಿನೂತನ ಪ್ರತಿಭಟನೆ ನಡೆಸಲಾಯಿತು. ಆಟೋರಿಕ್ಷಾ ಚಾಲಕರ ಸಂಘದವರು, ಆಟೋ ರಿಕ್ಷಾಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ಅಲ್ಲದೇ ಪೆಟ್ರೋಲ್, ಡೀಸೆಲ್ ಹರಾಜು ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಪ್ರತಿಕೃತಿ ದಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಭಾರತ್ ಬಂದ್‌ ಹಿನ್ನೆಲೆ ಪ್ರತಿಭಟನೆ ನಡೆಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಮಹಾನಗರ ಪಾಲಿಕೆ ಎದುರಿಗೆ ಪ್ರತಿಭಟನೆ ನಡೆಯುತ್ತಿದ್ದ ವೇಳೆ, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪ್ರತಿಕೃತಿಗಳಿಗೆ ಹಚ್ಚಿದ್ದ ಬೆಂಕಿ ನಂದಿಸಿದ್ದಾರೆ.

ಮಂಡ್ಯ: ಸಕ್ಕರೆ ನಾಡಿನಲ್ಲಿ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯದಲ್ಲಿ ಯಾವುದೇ ಪ್ರತಿಭಟನೆ ನಡೆದಿಲ್ಲ. ಸ್ವಯಂ ಪ್ರೇರಿತವಾಗಿ ಕೆ.ಎಸ್.ಆರ್.ಟಿ.ಸಿ. ಬಸ್, ಚಿತ್ರಮಂದಿರಗಳು, ಕೆಲ ಅಂಗಡಿ ಮುಗ್ಗಟ್ಟು ಮಾತ್ರ ಬಂದ್ ಆಗಿದೆ.

ಕೊಡಗು: ಕೊಡಗಿನಲ್ಲೂ ಕೂಡ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋ ಚಾಲಕರ ಸಂಘ, ವಿವಿಧ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿಲ್ಲ. ಅಲ್ಲದೇ ಇಲ್ಲಿನ ಕಾಂಗ್ರೆಸ್ ಪಕ್ಷದವರೂ ಕೂಡ ಮೌನ ವಹಿಸಿದ್ದು, ಎಂದಿನಂತೆ ಜನಜೀವರ ಸಾಗಿದೆ.

ಈಗಾಗಲೇ ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕಷ್ಟಕ್ಕೀಡಾಗಿದ್ದು, ಮತ್ತೆ ಪುನರುವ್ಯವಸ್ಥೆ ಕಾಮಗಾರಿಗಳಿಗೆ ಅಡ್ಡಿಯಾಗುವ ಹಿನ್ನೆಲೆ, ಬಂದ್‌ಗೆ ಬೆಂಬಲ ನೀಡದಿರಲು, ಕೆಲವು ಪಕ್ಷಗಳು ಮತ್ತು ಕೆಲ ಸಂಘಟನೆಗಳು ತೀರ್ಮಾನಿಸಿದೆ.

ಚಾಮರಾಜನಗರ: ತೈಲ ಬೆಲ ಏರಿಕೆ ನೀತಿಯನ್ನು ಖಂಡಿಸಿ ಚಾಮರಾಜನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಗಿದ್ದು, ಎತ್ತನ ಗಾಡಿ ಮೇಲೆ ಬೈಕು ,ಸಿಲಿಂಡರ್ ಹಾಕಿಕೊಂಡು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಮಾಡಲಾಯಿತು.

ರಾಯಚೂರು : ಬಿಸಿಲನಾಡು ರಾಯಚೂರಿನಲ್ಲೂ ಕೂಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಂಸದ ಬಿ.ವಿ.ನಾಯಕ್ ಎತ್ತಿನ ಬಂಡಿಯಲ್ಲಿ ನಿಂತು ಪ್ರತಿಭಟನೆ ಮಾಡಿದ್ರು. ಅಲ್ಲದೇ ನಗರದ ಅಂಬೇಡ್ಕರ್ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇನ್ನು ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನ ಓಡಾಟವಿಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು.

Next Story

RELATED STORIES