Top

'ಮೈಸೂರು ರಾಜವಂಶಸ್ಥರಿಗೆ ಗೌರವಧನ ನೀಡಬೇಡಿ'

ಮೈಸೂರು ರಾಜವಂಶಸ್ಥರಿಗೆ ಗೌರವಧನ ನೀಡಬೇಡಿ
X

ಮೈಸೂರು: ಇನ್ನೇನು ಕೆಲವೇ ದಿನಗಳಲ್ಲಿ ವಿಜಯದಶಮಿ ದಸರಾ ಬರಲಿದೆ. ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಅದ್ಧೂರಿ ಸಿದ್ಧತೆ ನಡೆದಿದೆ. ಆದರೆ ದಸರಾ ದರ್ಬಾರ್ ಶುರುವಾಗುವ ಮುನ್ನವೇ ಗೌರವಧನದ ವಾರ್ ಶುರುವಾಗಿದೆ.

ಇತಿಹಾಸ ತಜ್ಞ ಫ್ರೋ.ನಂಜರಾಜ್ ಅರಸ್‌ ರಾಜವಂಶಸ್ಥರಿಗೆ ಗೌರವಧನ ನೀಡದಂತೆ ಆಗ್ರಹಿಸಿದ್ದು, ಇದೇನು ಕಪ್ಪಕಾಣಿಕೆಯಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ರಾಜಮನೆತನಕ್ಕೆ ನೀಡುವ ಕಪ್ಪಕಾಣಿಕೆಯಾ..? ಇದು ದಸರಾ ಸಂದರ್ಭದಲ್ಲಿ ಬರುವ ಸಂಪ್ರದಾಯವಂತೆ.? ಏನು ಈ ಸಂಪ್ರದಾಯವೆಂದರೆ ಯಾರ ಬಳಿ ಉತ್ತರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರಶ್ನಿಸಿದ ನಂಜರಾಜ್ ಅರಸ್, ಏತಕ್ಕಾಗಿ ಈ ಗೌರವಧನ ನೀಡಬೇಕು, ಹಿಂದೆ ಪಾಳೆಗಾರರು ವಿಜಯನಗರ ಅರಸರಿಗೆ ನೀಡುತ್ತಿದ್ದರು. ಬ್ರಿಟಿಷರಿಗೆ ರಾಜಮನೆತನದವರು ನೀಡುತ್ತಿದ್ದರು. ಈಗ ರಾಜಮನೆತನಕ್ಕೆ ಸರ್ಕಾರಗಳು ನೀಡುತ್ತಿವೆ. ನಾವು ಪ್ರಜಾಪ್ರಭುತ್ವದಲ್ಲಿದ್ದೇವಾ..? ಅಥವಾ ರಾಜವಂಶಸ್ಥರ ಅಧಿಪತ್ಯದಲ್ಲಿದ್ದೇವಾ..?ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಈ ರೀತಿ ಹಣ ನೀಡುವುದು ಲಂಚವಾಗುತ್ತದೆ. ತಕ್ಷಣ ಇದನ್ನು ನಿಲ್ಲಿಸಿ ಸರ್ಕಾರ ಹಣ ಉಳಿಸಿ. ಇದೇ ಹಣವನ್ನು ಕೊಡಗಿಗೆ ನೀಡಿ. ನೆರೆಪೀಡಿತ ಕೊಡಗಿಗೆ ಕೊಟ್ಟರೆ ದೊಡ್ಡವರಾಗುತ್ತಾರೆ. ರಾಜಮನೆತನದವರಾಗಲಿ, ಸರ್ಕಾರವಾಗಲಿ ಹಣವನ್ನು ಕೊಡಗಿಗೆ ನೀಡಿ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಅರಸ್ ಆಗ್ರಹಿಸಿದ್ದಾರೆ.

ಇನ್ನು ಮಾಹಿತಿ ಹಕ್ಕು ಅದಿನಿಯಮದಡಿ 2012ರಿಂದ 2016/17ರವರೆಗಿನ ಮಾಹಿತಿ ಪಡೆದಿದ್ದು, ಈಗಾಗಲೇ 1ಕೋಟಿ 36ಲಕ್ಷ ಹಣ ನೀಡಿದ್ದಾರೆ. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ರಾಜಮನೆತನಕ್ಕೆ ಗೌರವ ಧನ ನೀಡಬೇಡಿ ಎಂದು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಅರಸ್ ಒತ್ತಾಯ ಮಾಡಿದ್ದಾರೆ.

--------------

Next Story

RELATED STORIES