Top

ಹಸುವಿಗೆ ಭರ್ಜರಿ ಸೀಮಂತ ಮಾಡಿದ ರೈತರು.!

ಹಸುವಿಗೆ ಭರ್ಜರಿ ಸೀಮಂತ ಮಾಡಿದ ರೈತರು.!
X

ಹಾವೇರಿ : ಹೆಣ್ಣು ಮಕ್ಕಳಿಗೆ ಆಕೆಯ ಮನೆಯವರು ಸಾಮಾನ್ಯವಾಗಿ ಸೀಮಂತ ಮಾಡ್ತಾರೆ. ಚೊಚ್ಚಲ ಗರ್ಭೀಣಿಯಾದ ಹಸುವಿಗೆ ಸೀಮಂತ ಎಲ್ಲಿಂದ ಬರಬೇಕು ಅಲ್ವಾ. ಆದ್ರೆ ಇಲ್ಲೊಬ್ಬ ರೈತರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸೀಮಂತ ಮಾಡಿದಂತೆಯೇ ಭರ್ಜರಿಯಾಗಿ ಹಸುವಿಗೆ ಸೀಮಂತ ಮಾಡಿದಾರೆ. ಅದು ಎಲ್ಲಿ ಅಂತ ಮುಂದೆ ಓದಿ..

ಮನೆ ಮುಂದೆ ಕಾಣೋ ಹಂದರ. ಸೋಬಾನೆ ಪದ ಹಾಡ್ತಿರೋ ಮಹಿಳೆಯರು. ಸಂಭ್ರಮಕ್ಕೆ ತಯಾರಾಗಿರೋ ಮಂಟಪ. ತರಹೇವಾರಿ ಊಟ ಸವಿತಿರೋ ಜನರು.

ಹೌದು ಹೀಗೆ ಕಂಡು ಬಂದಿದ್ದು, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ರೈತ ರುದ್ರಗೌಡ ಕಾಡನಗೌಡ್ರ ಮನೆಯಲ್ಲಿ. ಹಾಗಂತ ರೈತನ ಮನೆಯಲ್ಲಿ ಯಾವುದೇ ಮದುವೆ, ಮುಂಜಿ ಇರ್ಲಿಲ್ಲ. ಇದ್ದದ್ದು ಗೌರಿ ಸೀಮಂತ.

ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಯಾರೋ ಆರು ತಿಂಗಳ ಆಕಳು ಕರುವೊಂದನ್ನ ಕಸಾಯಿಖಾನೆಗೆ ತೆಗೆದುಕೊಂಡು ಹೋಗ್ತಿದ್ರಂತೆ. ಅದನ್ನ ಕಂಡಿದ್ದ ಕಾಡನಗೌಡ ಕುಟುಂಬದವರು ಎರಡು ನೂರು ರೂಪಾಯಿ ಕೊಟ್ಟು ಖರೀದಿಸಿದ್ರು.

ಮನೆಗೆ ಆಕಳು ಕರು ಬಂದ್ಮೇಲೆ ಕುಟುಂಬಕ್ಕೆ ಸಾಕಷ್ಟು ಒಳ್ಳೆಯದು ಆಗಿದೆಯಂತೆ. ಈಗ ಮನೆಯ ತುಂಬ ಸಾಕಷ್ಟು ದನಕರುಗಳು, ಸಾಕಷ್ಟು ಜಮೀನು ಹೀಗೆ ಕುಟುಂಬಕ್ಕೆ ಸಾಕಷ್ಟು ಅನುಕೂಲ ಆಗಿದೆಯಂತೆ. ಹೀಗಾಗಿ ಕರು ಚೊಚ್ಚಲ ಗರ್ಭೀಣಿ ಆದ್ಮೇಲೆ ಭರ್ಜರಿ ಸೀಮಂತ ಮಾಡಬೇಕು ಅಂತಾ ರೈತ ಕುಟುಂಬದವರು ನಿರ್ಣಯಿಸಿದ್ರಂತೆ. ಆದ್ರೆ ಅದ್ಯಾಕೋ ಕೆಲವು ವರ್ಷಗಳಾದ್ರೂ ಆಕಳು ಗರ್ಭ ಧರಿಸಲಿಲ್ವಂತೆ. ನಂತರ ಪಶು ವೈದ್ಯರು ಚಿಕಿತ್ಸೆ ನೀಡಿದಾಗ ಆಕಳು ಗರ್ಭ ಧರಿಸಿದೆ.

ಈ ಹಿನ್ನಲೆಯಲ್ಲಿ ಕುಟಂಬಸ್ಥರು, ಆಕಳಿಗೆ ಗೌರಿಗೆ ಸೀರೆ ಉಡಿಸಿ, ಕೊಂಬಿಗೆ ಹಸಿರು ಬಳೆ ತೊಡಿಸಿ ಭರ್ಜರಿ ಅಲಂಕಾರ ಮಾಡಿದರು. ಬಂಗಾರದ ಆಭರಣಗಳನ್ನ ತೊಡಿಸಿ ಖುಷಿಪಟ್ಟರು. ನಂತರ ಆಕಳಿಗೆ ಆರತಿ ಬೆಳಗಿ ಸೀಮಂತದ ತರಹೇವಾರಿ ತಿನಿಸುಗಳನ್ನ ತಿನ್ನಿಸಿದ್ರು.

ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಮಾಡುವಂತೆ ಹಸು ಗೌರಿಗೆ ಸೀಮಂತ ಮಾಡಿ ಸಂಭ್ರಮಿಸಿದ್ರು. ಸೀಮಂತ ಸಂಭ್ರಮಕ್ಕೆ ಮಹಿಳೆಯರ ಸೋಬಾನೆ ಪದದ ನಿನಾದದ ಸಾಥ್ ನೀಡಿತು. ರೈತ ಕಾಡನಗೌಡ್ರ ಮನೆಯಲ್ಲಿನ ಸಂಭ್ರಮಕ್ಕೆ ಕುಟುಂಬದ ಮಹಿಳೆಯರು ಮತ್ತು ಗ್ರಾಮಸ್ಥರು ಸಾಕ್ಷಿಯಾದ್ರು.

ಇನ್ನು ಕುಟುಂಬದಲ್ಲಿ ನಡೆಯೋ ಹೆಣ್ಣು ಮಕ್ಕಳ ಸೀಮಂತಕ್ಕೆ ಆಗಮಿಸುವಂತೆ ಕಾಡನಗೌಡ್ರ ಕುಟುಂಬದ ಸಂಬಂಧಿಕರು, ಬೀಗರು ಸೇರಿದಂತೆ ನೂರಾರು ಜನರು ಸಾಕ್ಷಿಯಾದ್ರು. ಗೌರಿ ಸೀಮಂತಕ್ಕೆ ಬಂದ ಬಹುತೇಕ ಜನರು ತರಹೇವಾರಿ ತಿನಿಸುಗಳ ಬಯಕೆಯ ಬುತ್ತಿ ತಂದಿದ್ರು. ಗೌರಿಯ ಸೀಮಂತಕ್ಕೆ ಬಂದ ಜನರಿಗೆ ಭರ್ಜರಿ ಬೋಜನ ಮಾಡಿಸಲಾಯ್ತು. ಕರಿಗಡಬು, ಜಿಲೇಬಿ, ಗೋದಿ ಹುಗ್ಗಿ, ಕಡಕ್ ರೊಟ್ಟಿ, ಚಟ್ನಿ, ಚಪಾತಿ, ಕಾಳು ಪಲ್ಯ ಸೇರಿದಂತೆ ತರಹೇವಾರಿ ಊಟವನ್ನ ಮಾಡಿಸಲಾಗಿತ್ತು.

ಹೆಣ್ಣು ಚೊಚ್ಚಲ ಗರ್ಭೀಣಿಯರಾದಾಗ ಮಾಡೋ ಸೀಮಂತಕ್ಕಿಂತಲೂ ಅತ್ಯಂತ ಸಂಭ್ರಮ, ಸಡಗರಿಂದ ಗೌರಿಯ ಸೀಮಂತ ಮಾಡಿ ರೈತ ಕುಟುಂಬದವರು ಸಂಭ್ರಮಿಸಿದ್ರು. ಒಟ್ಟಾರೆ ಮನೆಯಲ್ಲಿನ ಚೊಚ್ಚಲ ಗರ್ಭೀಣಿಯರಿಗೆ ಮಾಡುವಂತೆ ಹಸು ಗೌರಿಗೆ ಸೀಮಂತ ಮಾಡಿದ್ದು ವಿಶೇಷವಾಗಿತ್ತು.

ವರದಿ : ರಾಜು ಅಣಬೇರ್, ಟಿವಿ5 ಹಾವೇರಿ

Next Story

RELATED STORIES