Top

ಜೆಡಿಎಸ್ ನಾಯಕರಿಗೆ ತಲೆಬಿಸಿ ತಂದಿಟ್ಟ ಡೆಪ್ಯೂಟಿ ಸ್ಪೀಕರ್ ರಿಸೈನ್ ನಿರ್ಧಾರ.!

ಜೆಡಿಎಸ್ ನಾಯಕರಿಗೆ ತಲೆಬಿಸಿ ತಂದಿಟ್ಟ ಡೆಪ್ಯೂಟಿ ಸ್ಪೀಕರ್ ರಿಸೈನ್ ನಿರ್ಧಾರ.!
X

ಬೆಂಗಳೂರು : ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿಯವರ ರಾಜೀನಾಮೆ ನಿರ್ಧಾರ ಇದೀಗ ಜೆಡಿಎಸ್ ನಾಯಕರಿಗೆ ತಲೆಬಿಸಿ ತಂದಿಟ್ಟಿದೆ. ಟಿವಿ5 ನಲ್ಲಿ ವಿವರವಾದ ಸುದ್ದಿ ಬಿತ್ತರವಾದ ಬೆನ್ನಲ್ಲೇ ಪರಿಸ್ಥಿತಿ ಶಾಂತಗೊಳಿಸಲು ಸಿಎಂ ಕುಮಾರಸ್ವಾಮಿ ಮಧ್ಯಪ್ರವೇಶ ಮಾಡಿದ್ದಾರೆ.

ಕೃಷ್ಣಾರೆಡ್ಡಿಯವರ ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದ್ರೆ ಪ್ರಯತ್ನ ಸಫಲವಾಯ್ತಾ.? ಇಲ್ಲಾ ವಿಫಲವಾಯ್ತಾ.? ಅನ್ನೋ ಕುತೂಹಲ ನಿಮಗೂ ಇದೆ ಅಲ್ವಾ.. ಹಾಗಾದ್ರೆ ಈ ಸುದ್ದಿ ಓದಿ..

ಉಪ ಸಭಾಧ್ಯಕ್ಷರ ರಾಜಿನಾಮೆ ನಿರ್ಧಾರ

ಟಿವಿ5 ವರದಿ ಬಿತ್ತರ ಹಿನ್ನೆಲೆ ಮಧ್ಯಪ್ರವೇಶಿಸಿದ ಸಿಎಂ ಕುಮಾರಸ್ವಾಮಿ

ನಿನ್ನೆಯಷ್ಟೇ ವಿಧಾನಸಭೆಯ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿಯವರು ರಾಜೀನಾಮೆ ನೀಡೋಕೆ ಮುಂದಾಗಿದ್ದಾರೆಂದು ಟಿವಿ5 ಮೊದಲು ವರದಿ ಬಿತ್ತರಿಸಿತ್ತು..

ಇದೇ ಸೆಪ್ಟಂಬರ್ 11ರಂದು ಕೃಷ್ಣಾರೆಡ್ಡಿ ರಾಜೀನಾಮೆ ನೀಡ್ತಾರೆ ಅನ್ನೋ ಸುದ್ದಿಯನ್ನ ನೋಡಿದ ಸಿಎಂ ಕುಮಾರಸ್ವಾಮಿ ಪರಿಸ್ಥಿತಿ ಶಮನಕ್ಕೆ ಮುಂದಾಗಿದ್ದರು.

ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಕೃಷ್ಣಾರೆಡ್ಡಿಯವರಿಗೆ ದೂರವಾಣಿ ಕರೆಮಾಡಿದ ಸಿಎಂ ಸಾಹೇಬ್ರು ಕೃಷ್ಣಾರೆಡ್ಡಿಯವರೇ ಏನಿದೆಲ್ಲಾ ಅಂತ ಪ್ರಶ್ನೆಹಾಕಿದ್ರು. ಮಾಧ್ಯಮಗಳಲ್ಲಿ ದಿನವೂ ಸರ್ಕಾರದ ವಿರುದ್ಧ ಸುದ್ದಿಗಳು ಬರ್ತಿವೆ.

ಇಂತಹ ಪರಿಸ್ಥಿತಿಯಲ್ಲೇ ನೀವು ಈ ನಿರ್ಧಾರಕ್ಕೆ ಬಂದರೆ ಹೇಗೆ.? ನಿಮಗೆ ಆಗಿರುವ ಸಮಸ್ಯೆಯನ್ನ ನಾನು ಸರಿಪಡಿಸುತ್ತೇನೆ ಮೊದಲು ನಿರ್ಧಾರವನ್ನ ವಾಪಸ್ ತೆಗೆದುಕೊಳ್ಳಿ ಅಂತ ಮನವಿ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿಗೆ ಡೆಪ್ಯೂಟಿ ಸ್ಪೀಕರ್ ಕೊಟ್ಟ ಉತ್ತರವೇನು?

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುತ್ತಾರಾ ಚಿಂತಾಮಣಿ ಶಾಸಕರು

ಇನ್ನು ಕುಮಾರಸ್ವಾಮಿಯವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ ಮನವಿಗೆ ಕೃಷ್ಣಾರೆಡ್ಡಿ ಖಡಾಖಂಡಿತ ನಿರಾಕರಿಸಿದ್ದಾರೆ. ನನ್ನ ನಿರ್ಧಾರದ ಹಿಂದಿನ ಕಾರಣವನ್ನ ನಿಮ್ಮಗಮನಕ್ಕೂ ತಂದಿದ್ದೇನೆ, ದೊಡ್ಡವರ ಮುಂದೆಯೂ ಪ್ರಸ್ತಾಪಿಸಿದ್ದೇನೆ ಹೀಗಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಯಾಗಿರೋದ್ರಿಂದ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಅಂತ ತಮ್ಮ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾರೆ.

ಕೃಷ್ಣಾರೆಡ್ಡಿಯವರ ರಾಜೀನಾಮೆ ನಿರ್ಧಾರಕ್ಕೆ ಕಾರಣವೇನು?

ಸಿಎಂ ಕುಮಾರಸ್ವಾಮಿಯವರ ಬಳಿ ತೋಡಿಕೊಂಡ ನೋವೇನು?

ವಿಧಾನಸಭೆ ಉಪಸಭಾಧ್ಯಕ್ಷರ ರಾಜೀನಾಮೆ ನಿರ್ಧಾರಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ವಿಧಾನಸೌಧದಲ್ಲಿರುವ ಸಿಎಂ ಆಪ್ತ ವಲಯದ ಅಧಿಕಾರಿಗಳು ಬೆಲೆ ನೀಡ್ತಿಲ್ಲವಂತೆ. ಸಿಎಂ ಅವರ ಕಚೇರಿಯ ವಿಶೇಷ ಪ್ರಧಾನಕಾರ್ಯದರ್ಶಿ ಯವರ ಮೇಲೆ ಆರೋಪದ ಬೆರಳು ತೋರಿಸ್ತಾರೆ. ಕಳೆದ 15 ದಿನಗಳ ಹಿಂದೆ ಅಸಿಸ್ಟಿಂಟ್ ಡೈರೆಕ್ಟರ್ ವರ್ಗಾವಣೆಗೆ, ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ಪತ್ರ ಬರೆದಿದ್ದರಂತೆ.

ಆದರೆ ಇಲ್ಲಿಯವರೆಗೂ ಅದರ ಬಗ್ಗೆ ಸಿಎಂ ಆಪ್ತ ಅಧಿಕಾರಿ ಗಮನನೀಡಿಲ್ಲವಂತೆ. ಡೆಪ್ಯೂಟಿ ಸ್ಪೀಕರ್ ಪತ್ರಕ್ಕೂ ಬೆಲೆ ನೀಡದೆ ಬುಟ್ಟಿಗೆ ಹಾಕಿದ್ದಾರಂತೆ. ಜೊತೆಗೆ ಕೃಷ್ಣಾರೆಡ್ಡಿಯವರ ಕ್ಷೇತ್ರದ ಅನುದಾನ ವಿಚಾರದಲ್ಲಿ ಈ ಅಧಿಕಾರಿ ಇಲ್ಲಸಲ್ಲದ ಕಿರಿಕಿರಿ ಮಾಡ್ತಿದ್ದಾರಂತೆ.

ಡೆಪ್ಯೂಟಿ ಸ್ಪೀಕರ್ ಪತ್ರಕ್ಕೂ ಬೆಲೆ ಇಲ್ಲವೆಂದರೆ ನಾನು ಯಾಕೆ ಹುದ್ದೆಯಲ್ಲಿ ಮುಂದುವರಿಯಬೇಕು ಅನ್ನೋದು ರೆಡ್ಡಿಯವರ ಅಸಮಾಧಾನ.

ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಕೃಷ್ಣಾರೆಡ್ಡಿ ಈ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದು ಇದರ ಬಗ್ಗೆಯೇ ಬೆಳಗ್ಗೆ ಕುಮಾರಸ್ವಾಮಿಯವರಿಗೂ ತಿರುಗೇಟು ನೀಡಿದ್ದು ಅನ್ನೋದು ವಾಸ್ತವಿಕ ಸತ್ಯ. ಅಲ್ಲದೆ ಪಕ್ಷದಲ್ಲಿಯೂ ತಮ್ಮ ಮಾತಿಗೆ ಬೆಲೆ ಇಲ್ಲ ಅನ್ನೋ ಕೊರಗೂ ಇದರ ಹಿಂದೆ ಸೇರಿಕೊಂಡಿದೆ.

ಇನ್ನು ಕೃಷ್ಣಾರೆಡ್ಡಿಯವರ ಸಮಸ್ಯೆ ವಿಚಾರದಲ್ಲಿ ಸಿಎಂ ಸಾಹೇಬ್ರಿಗೆ ಗೊಂದಲ ಪ್ರಾರಂಭವಾಗಿದೆ. ಯಾಕಂದ್ರೆ ಕೃಷ್ಣಾರೆಡ್ಡಿಯವರಿಗೆ ಕಿರಿಕಿರಿ ಮಾಡ್ತಿರೋದು ಬೇರಾರು ಅಲ್ಲಾ ಸಿಎಂ ಸಂಬಂಧಿಕ ಅಧಿಕಾರಿ ಅನ್ನೋದು ದೊಡ್ಡ ಸಮಸ್ಯೆಯಾಗಿದೆ.

ಇತ್ತ ತಮ್ಮ ಪಕ್ಷದ ಶಾಸಕರನ್ನೂ ಬಿಡುವಂತಿಲ್ಲ,ಅತ್ತ ತಮ್ಮ ಸಂಬಂಧಿ ಅಧಿಕಾರಿಯನ್ನೂ ಬಿಡುವಂತಿಲ್ಲ ಈ ಧ್ವಂಧ್ವ ಪರಿಸ್ಥಿತಿಗೆ ಸಿಎಂ ಕುಮಾರಸ್ವಾಮಿ ಸಿಲುಕಿದ್ದಾರೆ.

ಒಟ್ನಲ್ಲಿ ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿಯವರು ಸೆಪ್ಟಂಬರ್ 11 ರಂದು ರಾಜೀನಾಮೆ ನೀಡೋಕೆ ಮುಂದಾಗಿದ್ದಾರೆ..ಹಾಗೆಯೇ ಜೆಡಿಎಸ್ ನಾಯಕರಿಗೂ ತಲೆಬಿಸಿ ತಂದಿಟ್ಟಿರೋದು ಸುಳ್ಳಲ್ಲ. ಆದ್ರೆ ಈ ಸಮಸ್ಯೆಯನ್ನ ಜೆಡಿಎಸ್ ನಾಯಕರು ಪರಿಹರಿಸ್ತಾರಾ. ಇಲ್ಲಾ ಕೃಷ್ಣಾರೆಡ್ಡಿಯವರು ಆಪರೇಷನ್ ಕಮಲಕ್ಲೆ ಒಳಗಾಗ್ತಾರಾ ಅನ್ನೋದು ಸದ್ಯದಲ್ಲಿಯೇ ಹೊರಬೀಳಲಿದೆ.

ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES