ಮೋಹನ್ಲಾಲ್ಗೆ ಗಾಳ ಹಾಕಿತೇ ಬಿಜೆಪಿ?

2019ರಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲು ಹಲವು ತಂತ್ರ ರೂಪಿಸುತ್ತಿರುವ ಬಿಜೆಪಿ ಈಗ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ಗಾಳ ಹಾಕಿದೆ. ಮುಂಬರುವ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಬಿಜೆಪಿ ಕೋರಿದೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಮೋಹನ್ ಲಾಲ್ ಎಲ್ಲಿಯೂ ಖಚಿತಪಡಿಸಿಲ್ಲ.
ಮೋಹನ್ ಲಾಲ್ ಬಗ್ಗೆ ಹೆಚ್ಚು ಮೋಹ ಹೊಂದಿರುವ ಆರ್ಎಸ್ಎಸ್, ಸಭೆ ಸಮಾರಂಭ ನಡೆಸಿ ಚರ್ಚಿಸುತ್ತಿದೆ. ಆದ್ರೆ, ಆರ್ಎಸ್ಎಸ್ ಸಭೆಗಳ ಕುರಿತು ಕೇರಳ ಬಿಜೆಪಿ ರಾಜ್ಯ ಘಟಕಕ್ಕೆ ಯಾವುದೇ ಮಾಹಿತಿ ರವಾನೆಯಾಗಿಲ್ಲ. ವೈಯನಾಡಿನಲ್ಲಿ ತಮ್ಮ ಫೌಂಡೇಷನ್ ಆಯೋಜಿಸಿರುವ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿನ್ನೆ ಮೋಹನ್ ಲಾಲ್ ಅವರು ಮೋದಿ ಅವರನ್ನು ಭೇಟಿಯಾಗಿದ್ದರು.
ಇದನ್ನು ಮೋಹನ್ ಲಾಲ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಹಾಗೆಯೇ, ಮೋಹನ್ ಲಾಲ್ ಭೇಟಿ ಬಗ್ಗೆಯೂ ಮೋದಿ ಟ್ವಿಟ್ ಮಾಡಿದ್ದರು. ಈ ಬಳಿಕ ಸೂಪರ್ ಸ್ಟಾರ್ ರಾಜಕೀಯ ಪ್ರವೇಶ ಕುರಿತ ಸುದ್ದಿಗಳು ಹರಿದಾಡುತ್ತಿವೆ.
ಮೋಹನ್ ಲಾಲ್ ಅವರು ತಂದೆ ವಿಶ್ವನಾಥ್ ನಾಯರ್ ಮತ್ತು ತಾಯಿ ಶಾಂತಾಕುಮಾರಿ ಸ್ಮರಣಾರ್ಥ ವಿಶ್ವಶಾಂತಿ ಫೌಂಡೇಷನ್ ಸ್ಥಾಪಿಸಿದ್ದಾರೆ. ವೈಯನಾಡಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ನಿರ್ಮಿಸಿದ್ದು, ಇದರ ಉದ್ಘಾಟನೆಗೆ ಮೋದಿಗೆ ಆಹ್ವಾನ ನೀಡಿದ್ದಾರೆ.
ಪ್ರವಾಹ ಪರಿಹಾರ ಕಾರ್ಯಗಳಲ್ಲಿ ವಿಶ್ವಶಾಂತಿ ಫೌಂಡೇಷನ್ ಆರ್ಎಸ್ಎಸ್ನ ಸೇವಾ ಭಾರತಿಯೊಂದಿಗೆ ಕೈಜೋಡಿಸಿದೆ. ಈ ಫೌಂಡೇಷನ್ ಮೂಲಕ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆರ್ಎಸ್ಎಸ್ ಇದರ ಬೆನ್ನಿಗೆ ನಿಂತಿದೆ. ಕೇರಳದಲ್ಲಿ ಮೋಹನ್ ಲಾಲ್ ನಟನಾಗಿ ಹೆಸರು ಮಾಡಿದ್ದಾರೆ. ಆದ್ರೆ, ಅದಕ್ಕಿಂತ ಹೆಚ್ಚಿನದಾಗಿ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ತಿರುವನಂತಪುರಂ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕೇರಳದ ಬಿಜೆಪಿ ಮಾಜಿ ಮುಖಂಡ ಕಮ್ಮನಾಂ ರಾಜಶೇಖರನ್ ಮಿಜೋರಾಂ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಹೀಗಾಗಿ, ಆ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲು ಆರ್ಎಸ್ಎಸ್ ತೆರೆಮರೆ ಕಸರತ್ತು ನಡೆಸುತ್ತಿದೆ.
ಈ ನಡುವೆ, 2019ರಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದೇ ಹೇಳಲಾಗುತಿತ್ತು. ಆದ್ರೆ, ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಜನಪ್ರಿಯತೆ ಕುಗ್ಗತೊಡಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದೊಂದಿಗೆ ಅಧಿಕಾರ ಹಿಡಿಯೋದು ದುಸ್ತರವಾಗಿದೆ. ಒಂದು ವೇಳೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದರೂ ಆ ಪಕ್ಷಗಳು ಪ್ರಧಾನಮಂತ್ರಿ ಬದಲಾವಣೆಗೆ ಪಟ್ಟು ಹಿಡಿಯಬಹುದು ಎಂದೇ ಹೇಳಲಾಗಿದೆ.
ಸತತವಾಗಿ ಏರುತ್ತಿರುವ ತೈಲ ಬೆಲೆ, ಭ್ರಷ್ಟಾಚಾರ, ನಿರುದ್ಯೋಗ ಸೇರಿದಂತೆ ಇತರೆ ವಿಷಯಗಳ ಕುರಿತು ಮೋದಿ ಸರ್ಕಾರದ ವಿರುದ್ಧ ಜನರು ಸಮೀಕ್ಷೆಯಲ್ಲಿ ಕಿಡಿಕಾರಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಿರುವ ಸೀಟ್ಗಳಲ್ಲಿ ಬಹುತೇಕ ಸ್ಥಾನ ಕಳೆದುಕೊಳ್ಳಲಿದೆ.
ಮಿತ್ರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರೂ ಗರಿಷ್ಠ ಪ್ರಮಾಣ ಸೀಟ್ ಗೆಲ್ಲುವಲ್ಲಿ ಬಿಜೆಪಿ ವಿಫಲವಾಗಿದೆ ಅಂತ ಸಮೀಕ್ಷೆ ಬಹಿರಂಗಪಡಿಸಿದೆ. ಆದಾಗ್ಯೂ ಕೆಲವು ರಾಜ್ಯಗಳಲ್ಲಿ ಅಮಿತ್ ಶಾ ಕಾರ್ಯತಂತ್ರ ಮತ್ತು ಮೋದಿ ವರ್ಚಸ್ಸು ಕೆಲಸ ಮಾಡಬಹುದು. ಆದ್ರೆ, ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಕನಸು ಮಾತ್ರ ಹಾಗೆಯೇ ಉಳಿಯಲಿದೆ.