Top

ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ದರ, ಜಿಎಸ್​ಟಿ ಹಾಕುತ್ತಾ ಕಡಿವಾಣ?

ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ದರ, ಜಿಎಸ್​ಟಿ ಹಾಕುತ್ತಾ ಕಡಿವಾಣ?
X

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಸಾರ್ವಜನಿಕರ ಜೇಬಿಗೆ ದಿನೇ ದಿನೇ ಕತ್ತರಿ ಬೀಳುತ್ತಿದೆ. ಪ್ರತಿ ಲೀಟರ್​​ ಪೆಟ್ರೋಲ್​​​​​ ದರ 85ರ ಗಡಿ ದಾಟಿದ್ದು, ಸಾರ್ವಜನಿಕರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ.

ಕಳೆದ 3 ವಾರಗಳಿಂದ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಾ ಮುಂದು ತಾ ಮುಂದು ಎಂದು ತೆರಿಗೆಯನ್ನ ಹೆಚ್ಚಿಸುತ್ತಿದ್ದು, ಸಾರ್ವಜನಿಕರಿಗೆ ಬರೆ ಮೇಲೆ ಬರೆ ಹಾಕ್ತಿದ್ದಾರೆ.

ಹೌದು, ಕಳೆದ 3 ವಾರಗಳಿಂದ ಮೋದಿ ಸರ್ಕಾರ ನಿರಂತರವಾಗಿ ತೈಲ ದರವನ್ನ ಏರಿಸುತ್ತಿದ್ದು ಜನಸಾಮಾನ್ಯರ ಮೇಲೆ ಪೆಟ್ರೋಲ್​​ ಬಾಂಬ್​​ಗಳನ್ನ ಹಾಕಲಾಗುತ್ತಿದೆ. ದೇಶದಲ್ಲಿ ಪೆಟ್ರೋಲ್​​ ದರ ದಾಖಲೆಯ ಗರಿಷ್ಠ ಮೊತ್ತವನ್ನ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್​​ ಬೆಲೆ 100ರೂಗಳನ್ನ ತಲುಪಲೂಬಹುದು ಎನ್ನಲಾಗಿದೆ.

ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್​​​ ಬೆಲೆ 85ರ ಗಡಿ ದಾಟಿದ್ದು, ಮುಂಬೈನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಗರಿಷ್ಠ ಮಟ್ಟ ತಲುಪಿದೆ.

ಎಲ್ಲೆಲ್ಲಿ ಎಷ್ಟಿದೆ ದರ..?

  • ನಗರ ಪೆಟ್ರೋಲ್​​ ಡೀಸೆಲ್​​​
  • ಬೆಂಗಳೂರು 81.83 73.52
  • ಮುಂಬೈ 86.25 75.62
  • ದೆಹಲಿ 79.24 71.24
  • ಕೋಲ್ಕತ್ತಾ 82.15 74.08
  • ಚೆನ್ನೈ 82.34 75.22
  • ಹೈದರಾಬಾದ್ 84.09 77.60

ಯುಪಿಎ ಆಡಳಿತದ ಅವಧಿಯಲ್ಲಿ ಪೆಟ್ರೋಲ್​​ ಬೆಲೆ ಹೆಚ್ಚಳ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡಿದ್ದ ಬಿಜೆಪಿ ಸರ್ಕಾರ ಇದೀಗ ಸದ್ದಿಲ್ಲದೆ ನಿರಂತರವಾಗಿ ತೈಲ ದರ ಏರಿಸಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ವಿವಿಧ ತೆರಿಗೆ ಹೇರುವ ಮೂಲಕ ಹೊರೆ ಹೇರುತ್ತಿದೆ. ಅಲ್ದೇ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿ ನಿಂದ ಒಂಭತ್ತು ಬಾರಿ ಅಬಕಾರಿ ಸುಂಕ ಹೆಚ್ಚಳ ಮಾಡಿದೆ.

2014 ರಲ್ಲಿ ಪೆಟ್ರೋಲ್‌ ಮೇಲಿನ ತೆರಿಗೆ ಪ್ರತಿ ಲೀಟರ್‌ಗೆ 9.2 ರೂ. ಇದ್ದದ್ದು, ಈಗ 19.48 ರೂ. ಗೆ ಹೆಚ್ಚಳವಾಗಿದೆ. ಅದೇ ರೀತಿ 3.46 ರೂ. ಇದ್ದ ಡೀಸೆಲ್‌ ಮೇಲಿನ ತೆರಿಗೆ ಈಗ 15.33ಕ್ಕೆ ಹೆಚ್ಚಳ ಮಾಡಲಾಗಿದೆ. 2013ರಲ್ಲಿ ಮನಮೋಹನ್​​​ ಸಿಂಗ್​​ ಪ್ರಧಾನಿಯಾಗಿದ್ದಾಗ ಮುಂಬೈನಲ್ಲಿ ​​ ಪ್ರತಿ ಲೀಟರ್​​​​​ ಪೆಟ್ರೋಲ್​​​ಗೆ 71.13 ಇದ್ದ ಬೆಲೆ ಇದೀಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ 86.72 ತಲುಪಿದೆ.

ರಾಜ್ಯದಲ್ಲೂ ಪೆಟ್ರೋಲ್​​ ಮೇಲಿನ ತೆರಿಗೆಯನ್ನ ಹೆಚ್ಚಿಸುತ್ತಿದ್ದು, ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಈ ಬಾರಿಯ ತಮ್ಮ ಬಜೆಟ್​​ನಲ್ಲಿ ಶೇ.30ರಷ್ಟಿದ್ದ ಪೆಟ್ರೋಲ್​​​ ಮೇಲಿನ ತೆರಿಗೆಯನ್ನ ಶೇ.32ಕ್ಕೆ ಏರಿಸಿದ್ದಾರೆ. ಅಲ್ಲದೇ ಡೀಸೆಲ್​​ ಮೇಲಿನ ರಾಜ್ಯ ತೆರಿಗೆಯನ್ನ ಶೇ19ರಿಂದ ಶೇ21ರಷ್ಟು ಏರಿಕೆ ಮಾಡಲಾಗಿದೆ.

ಅದರಂತೆ ಪ್ರತಿ ಲೀಟರ್​​​ಗೆ ಪೆಟ್ರೋಲ್​​ ಬೆಲೆ 1 ರೂಪಾಯಿ 14 ಪೈಸೆ ಹೆಚ್ಚಾದ್ರೆ ಡೀಸೆಲ್​​ ಬೆಲೆ 1ರೂಪಾಯಿ12 ಪೈಸೆ ಹೆಚ್ಚಳವಾಗಿದೆ. ಇದೀಗ ರಾಜ್ಯ ಸರ್ಕಾರದ ಜೊತೆ ಕೆಂದ್ರ ಸರ್ಕಾರ ನಿರಂತರವಾಗಿ ಹೆಚ್ಚಿಸುತ್ತಿರುವುದರಿಂದ ದೇಶದಲ್ಲಿ ಪೆಟ್ರೋಲ್​​ ದರ ಗರಿಷ್ಠ ಮಟ್ಟದ ದಾಖಲೆಯ ಹೆಚ್ಚಳವಾಗಿದೆ.

ಗ್ರಾಹಕರಿಗೆ ಪೆಟ್ರೋಲ್ ಬರೆ

ಪೆಟ್ರೋಲ್ ಮೂಲ ಬೆಲೆ 39.27 ರೂ.

ಮೋದಿ ಟ್ಯಾಕ್ಸ್ 19.48 ರೂ.

ಹೆಚ್​ಡಿಕೆ ಟ್ಯಾಕ್ಸ್ 19 ರೂ.

ಡೀಲರ್ ಕಮಿಷನ್ 3.64 ರೂ.

ಗ್ರಾಹಕರಿಗೆ ಮಾರಾಟ 81.39 ರೂ. ಪ್ರತಿ/ಲೀ.

ಜನಸಾಮಾನ್ಯರು ಖರೀದಿಸುವ ಪ್ರತಿ ಲೀಟರ್​​​​ ಪೆಟ್ರೋಲ್​​ನ ಮೂಲ ಬೆಲೆ 39.27ರೂಗಳಷ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರ ಒಟ್ಟು 19 ರೂಪಾಯಿ 48 ಪೈಸೆ ತೆರಿಗೆಯನ್ನ ಹೇರಿದೆ. ಜೊತೆಗೆ ಕರ್ನಾಟಕ ರಾಜ್ಯದಲ್ಲೂ ಕೂಡ 19ರೂಪಾಯಿಗಳ ತೆರಿಗೆಯನ್ನ ಹಾಕಲಾಗಿದೆ. ಇನ್ನು ಡೀಲರ್​​ ಕಮಿಷನ್​​ ಎಂದು 3 ರೂಪಾಯಿ 64 ಪೈಸೆ ವಿಧಿಸಿದ್ದು, ಗ್ರಾಹಕರಿಗೆ ತಲುಪುವಷ್ಟರಲ್ಲಿ ಪ್ರತಿ ಲೀಟರ್​​​ ಪೆಟ್ರೋಲ್​​​ 81 ರೂಪಾಯಿ 39 ಪೈಸೆಗೆ ಮಾರಾಟವಾಗುತ್ತಿದೆ.

ಗ್ರಾಹಕರಿಗೆ ಡೀಸೆಲ್ ಹೊರೆ

ಡೀಸೆಲ್ ಮೂಲ ಬೆಲೆ 42.90 ರೂ.

ಮೋದಿ ಟ್ಯಾಕ್ಸ್ 15.33 ರೂ.

ಹೆಚ್​ಡಿಕೆ ಟ್ಯಾಕ್ಸ್ 12.80 ರೂ.

ಡೀಲರ್ ಕಮಿಷನ್ 2.53 ರೂ.

ಗ್ರಾಹಕರಿಗೆ ಮಾರಾಟ 73.50 ರೂ.

ಇನ್ನು ಡೀಸೆಲ್​ ಖರೀದಿಸುವ ಗ್ರಾಹಕರ ಮೇಲೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹೊರೆ ನೋಡೋದಾದ್ರೆ ಡೀಸೆಲ್​​ನ ಮೂಲ ಬೆಲೆ 42 ರೂಪಾಯಿ 90 ಪೈಸೆಯಷ್ಟಿದ್ದು, ಕೇಂದ್ರ ಸರ್ಕಾರ 15 ರೂಪಾಯಿ 80 ಪೈಸೆ ತೆರಿಗೆ ಹಾಕಿದೆ. ಅಲ್ದೇ ರಾಜ್ಯ ಸರ್ಕಾರ ಡೀಸೆಲ್​​ ಮೇಲೆ 12 ರೂಪಾಯಿ 80 ಪೈಸೆ ತೆರಿಗೆ ವಿಧಿಸಿದ್ದು, ಜೊತೆಗೆ ಡೀಲರ್​​​ ಕಮಿಷನ್​​​ 2 ರೂಪಾಯಿ ಇದೆ. ಒಟ್ನಲ್ಲಿ ಪ್ರತಿ ಲೀಟರ್​​​ ಡೀಸೆಲ್​​ 73 ರೂಪಾಯಿ 50 ಪೈಸೆಗೆ ಗ್ರಾಹಕರಿಗೆ ಸೇರಲಿದೆ.

ಹಾಗಾದ್ರೆ ಪೆಟ್ರೋಲ್​​ ಹಾಗೂ ಡೀಸೆಲ್​​ನ್ನು ಜೆಎಸ್​​​ಟಿ ವ್ಯಾಪ್ತಿಗೆ ತಂದರೆ ಕಡಿಮೆಯಾಗಬಹುದಾ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರಲ್ಲಿ ಎದುರಾಗಿದೆ. ಪೆಟ್ರೋಲ್​​ ಡೀಸೆಲ್​​ ಜಿಎಸ್​ಟಿ ವ್ಯಾಪ್ತಿಗೆ ತರಲಾಗಿದ್ದೇ ಆದ್ರೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎನ್ನಲಾಗಿದೆ. ಅಲ್ದೇ ಕರ್ನಾಟಕದಲ್ಲಿ ಕನಿಷ್ಠ ಲೀಟರ್​​​ ಪೆಟ್ರೋಲ್ ಬೆಲೆ ​​ 45 ರೂಪಾಯಿಗಳಂತೂ ಇಳಿಕೆಯಾಗಲಿದ್ದು, ಡೀಸೆಲ್​​​​ 38 ರೂಪಾಯಿಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಜಿಎಸ್​​​ಟಿ ವ್ಯಾಪ್ತಿಗೆ ತೈಲವೂ ಬಂದರೆ ಕೇಂದ್ರದ ಅಬಕಾರಿ ಸುಂಕ ಮತ್ತು ರಾಜ್ಯದ ವ್ಯಾಟ್​​​ ಎರಡೂ ರದ್ದಾಗಲಿದೆ. ವಾಸ್ತವಿಕ ವೆಚ್ಚ 39.27 ರೂಪಾಯಿ ಮೇಲೆ ಜಿಎಸ್​​​ಟಿ ಅತಿ ಗರಿಷ್ಠ ದರ ಶೇ28ರಷ್ಟು ತೆರಿಗೆ ವಿಧಿಸಿದರೂ ಪೆಟ್ರೋಲ್​​ ಪ್ರತಿ ಲೀಟರ್​​​ಗೆ ಕೇವಲ 8 ರೂ ಹೆಚ್ಚಳವಾಗಲಿದೆ. ಅಲ್ದೇ, ಡೀಲರ್​​ ಕಮಿಷನ್​​ ಸೇರಿ ಅಂದಾಜಿಸಿದ್ರೆ 45 ರಿಂದ 46 ರೂಪಾಯಿಗಳವರೆಗೆ ಪೆಟ್ರೋಲ್​​ ಸಾಮಾನ್ಯ ಜನರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಆದರೆ GST ವ್ಯಾಪ್ತಿಗೆ ಪೆಟ್ರೋಲ್ ತರುವುದನ್ನ ​​​ರಾಜ್ಯಗಳು ಒಪ್ಪುತ್ತವೆಯೇ ಎಂಬ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಕಳೆದ ಬಾರಿ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳೂ ಸೇರಿ ಬಹತೇಕ ರಾಜ್ಯಗಳು ಜೆಎಸ್​​​ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸಿದ್ದವು.

ಕೇಂದ್ರ ಹಾಗೂ ರಾಜ್ಯಗಳ ಪಾಲಿಗೆ ಪೆಟ್ರೋಲ್​​​ ಮತ್ತು ಡೀಸೆಲ್ ತೈಲ ಸರ್ಕಾರದ ಬೊಕ್ಕಸ ತುಂಬಿಸುವ ಪ್ರಮುಖ ಸರಕುಗಳಾಗಿದ್ದು, ಜಿಎಸ್​​​ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳಿಗೆ ಬರುವ ಆದಾಯದಲ್ಲಿ ಎಲ್ಲಿ ಕಡಿಮೆಯಾಗುವುದೋ ಎಂಬ ಭಯ ಎಲ್ಲಾ ರಾಜ್ಯಗಳಿಗೂ ಇದೆ. ಹೀಗಿರುವಾಗ ಎಲ್ಲಾ ರಾಜ್ಯಗಳ ಮನವೊಲಿಸಿ ಕೇಂದ್ರ ಸರ್ಕಾರ ಜಿಎಸ್​​​ಟಿ ವ್ಯಾಪ್ತಿಗೆ ತೈಲವನ್ನ ತರುತ್ತಾ ಅನ್ನೋದನ್ನ ಕಾದುನೋಡಬೇಕಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿರಂತರವಾಗಿ ನಾ ಮುಂದು ತಾ ಮುಂದು ಎಂದು ಪೆಟ್ರೋಲ್​​ ಹಾಗೂ ಡೀಸೆಲ್​​ ಮೇಲಿನ ತೆರಿಗೆಯನ್ನ ಹೆಚ್ಚಿಸುತ್ತಿದ್ದು, ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಜನರು ತೀವ್ರ ಆಕ್ರೋಶ ಹೊರಹಾಕುತ್ತಿದ್ದು, ಜಿಎಸ್​​​ಟಿ ವ್ಯಾಪ್ತಿಗೆ ಪೆಟ್ರೋಲ್​​ ಡೀಸೆಲ್​​​ಅನ್ನು ತನ್ನಿ ಎಂದು ಆಗ್ರಹಿಸುತ್ತಿದ್ದಾರೆ.

Next Story

RELATED STORIES