Top

ವಸತಿ ರಹಿತರಿಗೆ ನೀಡುವ ಆಶ್ರಯ ಮನೆಯಲ್ಲೂ ಗೋಲ್‌ಮಾಲ್‌.?

ವಸತಿ ರಹಿತರಿಗೆ ನೀಡುವ ಆಶ್ರಯ ಮನೆಯಲ್ಲೂ ಗೋಲ್‌ಮಾಲ್‌.?
X

ದಾವಣಗೆರೆ : ವಸತಿಹೀನರಿಗೆ, ನಿರ್ಗತಿಕರಿಗೆ ಆಸರೆ ಕಲ್ಪಿಸಬೇಕಿದ್ದ ಯೋಜನೆ ಉಳ್ಳವರ ಪಾಲಾಗಿದೆ. ಯೋಜನೆ ಸಂಪೂರ್ಣ ಹಳ್ಳ ಹಿಡಿದಿದ್ದು, ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆದಿದೆ. ದಶಕಗಳ ಹಿಂದೆ ಅತೀವೃಷ್ಠಿಯಿಂದ ನೆಲೆ ಕಳೆದುಕೊಂಡಿದ್ದ ನೂರಾರು ಜನರಿಗೆ, ನೆಲೆ ಕಲ್ಪಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಶ್ರಯ ಮನೆ ನಿರ್ಮಿಸಿತ್ತು. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಆ ಬಗ್ಗೆ ಟಿವಿ5 ಎಕ್ಸ್‌ಕ್ಲೂಸಿವ್‌ ವರದಿ ಮುಂದೆ ಓದಿ..

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹೊರವಲಯದಲ್ಲಿ ನಿರ್ಮಾಣವಾಗಿರುವ ಬಡಾವಣೆ ಹೆಸರು "ಆಸರೆ". 2009 ರಲ್ಲಿ ಅತೀವೃಷ್ಠಿಯಿಂದಾಗಿ ಹರಪನಹಳ್ಳಿ ತಾಲೂಕಿನಲ್ಲಿ ನೂರಾರು ಜನ ನೆಲೆ ಕಳೆದುಕೊಂಡಿದ್ದರು. ಅವರಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಆಗಿನ ಕಂದಾಯ ಸಚಿವ, ಹರಪನಹಳ್ಳಿ ತಾಲೂಕಿನ ಶಾಸಕ ಜಿ.ಕರುಣಾಕರರೆಡ್ಡಿ ಸರ್ಕಾರದಿಂದ ಅನುದಾನ ತಂದು 540 ಮನೆಗಳನ್ನ ನಿರ್ಮಿಸಿದ್ದರು.

ಮನೆ ನಿರ್ಮಾಣಕ್ಕೆ ಜಾಗ ನೀಡಿದ ಕುಟುಂಬಗಳಿಗೆ 30 ಮನೆಗಳನ್ನ ನೀಡಿ ಉಳಿದ 510 ಮನೆಗಳನ್ನ ಸಂತ್ರಸ್ತರಿಗೆ ನೀಡುವ ಚಿಂತನೆ, ಯೋಜನೆಯದಾಗಿತ್ತು. ಆದರೇ ಮಳೆ ಸಂತ್ರಸ್ತರು ಕೇವಲ 150 ರಿಂದ 200 ಮನೆ ನೀಡಲಾಗಿದೆ. ಉಳಿದ ಮನೆಗಳನ್ನ ಶಾಸಕರ ಬೆಂಬಲಿಗರು, ಪ್ರಬಲರು, ಪ್ರಭಾವಿಗಳು ಲಾಭಿ ಮಾಡಿ ಪಡೆದುಕೊಂಡಿದ್ದಾರೆ.

ಈ ಹಿಂದಿನ ತಹಸೀಲ್ದಾರ್, ರೆವೆನ್ಯೂ ಇನ್ಸ್ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಪ್ರತಿಯೊಬ್ಬರು ಹಣ ಪಡೆದು ಸಿಕ್ಕಸಿಕ್ಕವರಿಗೆ ಮನೆ ಮಂಜೂರು ಮಾಡಿಕೊಟ್ಟಿದ್ದಾರೆ. ಆಗ ಅಲ್ಪಸ್ವಲ್ಪ ಹಣ ಕೊಟ್ಟು ಮನೆ ಮಂಜೂರು ಮಾಡಿಸಿಕೊಂಡವರು ನಂತರ ಆ ಮನೆಗಳನ್ನು ಲಕ್ಷ ಲಕ್ಷ ಹಣಕ್ಕೆ ಮಾರಿಕೊಂಡು ಜಾಗ ಖಾಲಿ ಮಾಡಿದ್ದಾರೆ.

ಆಶ್ರಯ, ಆಸರೆ, ಬಸವ, ಅಂಬೇಡ್ಕರ್ ಸೇರಿದಂತೆ ಸರ್ಕಾರದಿಂದ ಮಂಜೂರಾಗುವ ವಸತಿ ಯೋಜನೆಗಳ ಮನೆಗಳನ್ನ 20 ವರ್ಷಗಳ ವರೆಗೆ ಯಾರಿಗೂ ಪರಭಾರೆ ಅಥವಾ ಮಾರಾಟ ಮಾಡುವಂತಿಲ್ಲ. ಆದರೆ, ಇಲ್ಲಿನ ಆಸರೆ ಮನೆಗಳು ಈಗಾಗಲೇ ಲಕ್ಷ ಲಕ್ಷಕ್ಕೆ ಬಿಕರಿಯಾಗಿವೆ.

ಗ್ರಾಮ ಲೆಕ್ಕಾಧಿಕಾರಿಗಳು, ವೈದ್ಯರು ಸೇರಿದಂತೆ ಸರ್ಕಾರಿ ಕೆಲಸದಲ್ಲಿ ಇರುವವರು ಮನೆಗಳನ್ನ ಖರೀದಿ ಮಾಡಿಕೊಂಡಿದ್ದಾರೆ. ಹೀಗೆ ಅರ್ಹ ಫಲಾನುಭವಿಗಳಿಂದ ಆಶ್ರಯ ಮನೆ ಖರೀದಿ ಮಾಡಿದ ಅಧಿಕಾರಿಗಳು ಮನೆಗಳನ್ನ ಬೇರೆಯವರಿಗೆ ಬಾಡಿಗೆ ಕೊಟ್ಟು ಪಟ್ಟಣದಲ್ಲಿರುವ ತಮ್ಮ ಸ್ವಂತ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ.

ಅಲ್ಲದೆ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ಅವಧಿಯಲ್ಲೂ ಶಾಸಕರ ಬೆಂಬಲಿಗರು, ಪ್ರಭಾವಿಗಳು ಹಣಕೊಟ್ಟು ಮನೆಗಳನ್ನ ಖರೀದಿ ಮಾಡಿದ್ದಾರೆ. ಇನ್ನು ಕೆಲವರು ಬೀಗ ಹಾಕಿದ ಮನೆಗಳಿಗೆ ಅತಿಕ್ರಮ ಪ್ರವೇಶ ಮಾಡಿ ವಾಸ ಮಾಡುತ್ತಿದ್ದಾರೆ. ಇಷ್ಟಿದರೂ ಯಾವೊಬ್ಬ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಅಕ್ರಮ ತಡೆ ಮುಂದಾಗಿಲ್ಲ ಎನ್ನುತ್ತಾರೆ ಬಾಡಿಗೆದಾರರು.

ಒಟ್ಟಾರೆ ವಸತಿಹೀನರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು, ಅದು ಉಳ್ಳವರ ಪಾಲಾಗಿರೋದು ಶೋಚನೀಯ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅತಿಕ್ರಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಉಳ್ಳವರಿಗೆ ಪಾಲಾಗಿರುವ ಮನೆಗಳನ್ನ ವಾಪಸ್ ಪಡೆದು ಅರ್ಹರಿಗೆ ನೀಡಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES